
In ಆಲ್_ಹಾಲ್ ನ ಕಥೆಗಳು on September 30, 2006 by ಶೂನ್ಯ ಸಂಪಾದಕ
ಆಲ್_ಹಾಲ್ ತಮ್ಮ ಸಮಕಾಲೀನರ ನಡುವೆ ಮಹಾ ಗುರು ಎಂಬ ಬಿರುದಿಗೆ ಪಾತ್ರರಾದವರು. ಅವರಲ್ಲಿದ್ದ `ಗುರುತ್ವ’ವನ್ನು ಮೀರಿಸುವ ಯಾರೂ ಅವರ ಕಾಲದಲ್ಲಿ ಇರಲಿಲ್ಲ. ಇದನ್ನು ಸುಳ್ಳು ಮಾಡುವ ಉದ್ದೇಶದಿಂದ ಅಲ್ಲಿಗೆ ಬಂದ ಒಬ್ಬ `ಜ್ಞಾನಿ ಸಂತ’ ಅವರ ಜತೆ ಸಂವಾದ ಆರಂಭಿಸಿದ.
ಮಾತನಾಡಲು ಆರಂಭಿಸಿದ ಸ್ವಲ್ಪವೇ ಹೊತ್ತಿನಲ್ಲಿ ಆತನ ತಂತ್ರ ಏನು ಎಂಬುದು ಗುರು ಆಲ್_ಹಾಲ್‌ಗೆ ಅರ್ಥವಾಗಿ ಹೋಯಿತು. ಆದರೂ ಅವನ ಪ್ರಶ್ನೆಗಳಿಗೆ ಮಾಮೂಲಿನಂತೆಯೇ ಉತ್ತರಿಸುತ್ತಾ ಹೋದರು. ಅವರ ಉತ್ತರಗಳಿಂದ ಮತ್ತಷ್ಟು ಉತ್ತೇಜಿತನಾದ ಆತ ಮುಖ್ಯ ಪ್ರಶ್ನೆಯನ್ನು ಕೇಳಿಯೇ ಬಿಟ್ಟ.
`ನಿಮ್ಮ ಶಿಷ್ಯರಿಗೆ ಪ್ರಾಪ್ತಿಯಾಗುವ `ಟೌತ್ವ’ವಿದೆಯಲ್ಲ ಅದರ ಅರ್ಥ ಏನು?’
ಆಲ್_ಹಾಲ್ ಉತ್ತರಿಸಿದರು: `ಮುಂದೇನೂ ಸಂಭವಿಸುವುದಿಲ್ಲ ಎಂಬುದು ಅದರ ಅರ್ಥ’.

In ಆಲ್_ಹಾಲ್ ನ ಕಥೆಗಳು on September 29, 2006 by ಶೂನ್ಯ ಸಂಪಾದಕ
ಆಲ್_ಹಾಲ್‌ರ ಬಳಿಗೆ ಬಂದ ಆರು ಮಂದಿ ದೊಡ್ಡ ವಿದ್ವಾಂಸರ ಗುಂಪೊಂದು ಬಹಳ ಹೊತ್ತು ಏನೇನೋ ಚರ್ಚಿಸಿತು. ಚರ್ಚೆಯ ಹೊತ್ತು ಮತ್ತು ಗಾಂಭೀರ್ಯವನ್ನು ದೂರದಿಂದಲೇ ಗಮನಿಸಿದ್ದ ಟಾ_ರಸ ವಿದ್ವಾಂಸರೆಲ್ಲಾ ಹೋದ ನಂತರ ಗುರುಗಳಲ್ಲಿ ಕೇಳಿದ `ಅವರೇನು ಚರ್ಚಿಸುತ್ತಿದ್ದರು?’
ಗುರುಗಳು ಉತ್ತರಿಸಿದರು `ಅವರು `ಟೌತ್ವ’ವನ್ನು ವಿವರಿಸುತ್ತಿದ್ದರು’.
ಟಾ_ರಸ ಮರು ಪ್ರಶ್ನೆ ಹಾಕಿದ `ಆ ವಿವರಣೆ ಏನು’
ಗುರುಗಳು ಅದನ್ನೊಂದು ರೂಪಕದ ಮೂಲಕ ವಿವರಿಸಿದರು: `ಆರು ಬುದ್ಧಿವಂತ ಕುರುಡ ಆನೆಗಳು ಮನುಷ್ಯನ ರೂಪ ಹೇಗಿದೆ ಎಂದು ನೋಡಲು ತೀರ್ಮಾನಿಸಿದವು. ಹಾಗೆ ಒಂದು ಆನೆ ಮನುಷ್ಯನನ್ನು ತನ್ನ ಕಾಲಿನಲ್ಲಿ ಮೆಟ್ಟಿ ಸ್ವರೂಪವನ್ನು ಪರೀಕ್ಷಿಸಿ ಹೇಳಿತು ಮನುಷ್ಯ ಸಪಾಟಾಗಿದ್ದಾನೆ. ಉಳಿದ ಆರು ಆನೆಗಳೂ ಅವನನ್ನು ಮೆಟ್ಟಿ ಮನುಷ್ಯ ಸಪಾಟಾಗಿರುವುದನ್ನು ಖಚಿತ ಪಡಿಸಿದವು’.

In ಟಾ_ರಸನ ಕಥೆಗಳು on September 28, 2006 by ಶೂನ್ಯ ಸಂಪಾದಕ
ಆಲ್_ಹಾಲ್ ಅವರ ಆಶ್ರಮದಲ್ಲಿ ನಡೆದ ಘಟನೆ ಇದು. ಆಶ್ರಮದ ಮಧ್ಯೆ ಇದ್ದ ಎತ್ತರದ ಮರವೊಂದರ ಮೇಲೆ ಒಂದು ಬಿಳಿ ಧ್ವಜವಿತ್ತು. ಒಂದು ದಿನ ಗಾಳಿಗೆ ಧ್ವಜ ಜೋರಾಗಿ ಸದ್ದು ಮಾಡುತ್ತಿದ್ದಾಗ ಮರದ ಕೆಳಗೆ ನಿಂತಿದ್ದ ಇಬ್ಬರು ಶಿಷ್ಯರು ಧ್ವಜದ ಹಾರಾಟವನ್ನು ವಿಶ್ಲೇಷಿಸತೊಡಗಿದರು.
ಒಬ್ಬ ಹೇಳಿದ: ‘ಧ್ವಜ ಚಲಿಸುತ್ತಿದೆ. ಅಂದರೆ ಅದು ತನ್ನನ್ನು ಬಂಧಿಸಿಟ್ಟಿರುವ ಕಂಬದಿಂದ ವಿಮೋಚನೆ ಬಯಸುತ್ತಿದೆ’
ಎರಡನೆಯವನು ಇದನ್ನು ವಿರೋಧಿಸಿದ: ‘ಗಾಳಿ ಚಲಿಸುತ್ತಿದೆ. ಗಾಳಿ ಈಗಾಗಲೇ ಮುಕ್ತವಾಗಿರುವುದರಿಂದ ಧ್ವಜವನ್ನೂ ಮುಕ್ತಗೊಳಿಸಲು ಪ್ರಯತ್ನಿಸುತ್ತಿದೆ.’
ಈ ಹೊತ್ತಿಗೆ ಸ್ನಾನ ಮುಗಿಸಿ ಬರುತ್ತಿದ್ದ ಹಿರಿಯ ಶಿಷ್ಯರೊಬ್ಬರು ಇವರ ವಿವಾದವನ್ನು ಪರಿಹರಿಸಲು ‘ಧ್ವಜವೂ ಚಲಿಸುತ್ತಿಲ್ಲ, ಗಾಳಿಯೂ ಚಲಿಸುತ್ತಿಲ್ಲ. ಚಲಿಸುತ್ತಿರುವುದು ನಿಮ್ಮ ಮನಸ್ಸು’ ಎಂದು ಚರ್ಚೆಗೆ ಅಧ್ಯಾತ್ಮದ ಆಯಾಮ ಕೊಟ್ಟರು.
ಈ ಹೇಳಿಕೆಯ ತಾತ್ವಿಕತೆಯನ್ನು ಮೂವರೂ ಚರ್ಚಿಸಲಾರಂಭಿಸುವ ಹೊತ್ತಿಗೆ ಟಾ_ರಸನ ಆಗಮನವಾಯಿತು. ಮೂವರೂ ತಮ್ಮ ತಮ್ಮ ಅಭಿಪ್ರಾಯಗಳನ್ನು ಅವನಲ್ಲಿ ಹೇಳಿದರು.
ಟಾ_ರಸ ಸ್ವಲ್ಪ ಹೊತ್ತು ಯೋಚಿಸಿ ಹೇಳಿದ: ‘ಚಲಿಸುತ್ತಿರುವುದು ನಿಮ್ಮ ಮೂವರ ನಾಲಿಗೆ. ಅದಕ್ಕೆ ಮಾತುಗಳಿಂದ ಮುಕ್ತಿ ಬೇಕಾಗಿದೆ’

In ಟಾ_ರಸನ ಕಥೆಗಳು on September 28, 2006 by ಶೂನ್ಯ ಸಂಪಾದಕ
ಟಾ_ರಸ ಸಂಚಾರದಲ್ಲಿದ್ದಾಗ ಭೇಟಿಯಾದ ಪಶ್ಚಿಮದ ಜ್ಞಾನಿಯೊಬ್ಬ ತನ್ನನ್ನು ಕಾಡುತ್ತಿದ್ದ ಪ್ರಶ್ನೆಯೊಂದನ್ನು ಮುಂದಿಟ್ಟ- `ಪೂರ್ಣತೆ ಎಂದರೇನು?’
ಟಾ_ರಸ ಉತ್ತರಿಸಿದ. `ಅದು ಕನಸಿನಲ್ಲೂ ಕಲ್ಪನೆಯಲ್ಲೂ ಮಾತ್ರ ಇರುವಂಥದ್ದು. ಅದೊಂದು ವೇಳೆ ಸಾಕಾರಗೊಂಡರೆ ಈ ಜಗತ್ತು ಬದುಕಲು ಅಸಾಧ್ಯವಾದಷ್ಟು ಪೂರ್ಣವಾಗಿಬಿಡುತ್ತದೆ.’

In ಟಾ_ರಸನ ಕಥೆಗಳು on September 28, 2006 by ಶೂನ್ಯ ಸಂಪಾದಕ
ಟಾ_ರಸನಿಗೆ ಟೌತ್ವ ಪ್ರಾಪ್ತಿಯಾದ ಬಗೆ ಹೇಗೆ ಎಂಬ ಬಗ್ಗೆ ಅನೇಕ ಕತೆಗಳಿವೆ. ಇವುಗಳಲ್ಲಿ ಹಲವನ್ನು ಟಾ_ರಸ ನಿರಾಕರಿಸಿದ್ದ. ಕೆಲವನ್ನು `ಹೌದಾ!’ ಎಂಬ ಆಶ್ಚರ್ಯದೊಂದಿಗೆ ಆತನೇ ಕೇಳಿಸಿಕೊಳ್ಳುತ್ತಿದ್ದ. ನಿಮಗೆ ಹೇಗೆ ಟೌತ್ವ ಪ್ರಾಪ್ತಿಯಾಯಿತು ಎಂದು ಕೇಳಿದರೆ ಅವನು ಇವುಗಳಲ್ಲಿ ಒಂದನ್ನು ಆರಿಸಿಕೊಂಡು ಹೇಳುತ್ತಿದ್ದ. ಹೀಗೆ ಟಾ_ರಸ ಹೇಳಿದ ಕತೆಯೊಂದು ಹೀಗಿದೆ.
ಟಾ_ರಸ ಕಾಡಿನಲ್ಲಿ ಹೋಗುತ್ತಿರುವಾಗ ಹುಲಿಯೊಂದು ಎದುರಾಯಿತು. ಆಳವಾದ ಕಮರಿಯೊಂದರ ಬದಿಯಲ್ಲಿ ಟಾ_ರಸ ಹೋಗುತ್ತಿದ್ದ. ಹತ್ತಿರದಲ್ಲಿ ಯಾವ ಮರವೂ ಇರಲಿಲ್ಲ. ಎತ್ತರಕ್ಕೆ ಏರಿ ಪ್ರಾಣ ಉಳಿಸಿಕೊಳ್ಳುವಂತೆಯೇ ತಗ್ಗಿಗೆ ಇಳಿದು ಪ್ರಾಣ ಉಳಿಸಿಕೊಳ್ಳಬಹುದೆಂದು ತೀರ್ಮಾನಿಸಿದ ಟಾ_ರಸ ಕಮರಿಗೆ ಇಳಿಯಲು ನೋಡಿದ. ಅದೃಷ್ಟವಶಾತ್ ಒಂದು ಬಳ್ಳಿ ಇತ್ತು. ಅದನ್ನು ಹಿಡಿದುಕೊಂಡು ಅರ್ಧದಷ್ಟು ಕೆಳಗಿಳಿದಾಗ ಕಮರಿಯಲ್ಲೊಂದು ಹುಲಿ ನಿಂತು ಟಾ_ರಸ ಕೆಳಗಿಳಿಯುವುದನ್ನೇ ಆಸೆಯಿಂದ ನೋಡುತ್ತಿತ್ತು. ಕಂಗಾಲಾದ ಟಾ_ರಸ ಬಳ್ಳಿಯನ್ನು ಹಿಡಿದುಕೊಂಡು ನೇತಾಡುತ್ತಾ ನಿಂತರೆ ಮೇಲಿದ್ದ ಹುಲಿ ಕೆಳಗೆ ಇಣುಕಿ ಘರ್ಜಿಸುತ್ತಿತ್ತು.
ಇಂಥದ್ದೊಂದು ಕ್ಷಣದಲ್ಲಿ ಟಾ_ರಸನಿಗೆ ಕಂಡದ್ದು ಚಳ್ಳೆ ಹಣ್ಣಿನ ಗಿಡ. ಅತ್ತ ಬಾಗಿ ಒಂದು ಹಣ್ಣು ಬಾಯಿಗೆ ಹಾಕಿಕೊಂಡ. ಚಳ್ಳೆ ಹಣ್ಣು ಸಿಹಿಯಾಗಿರುವುದು ಟಾ_ರಸನಿಗೆ ಮೊಟ್ಟ ಮೊದಲ ಬಾರಿಗೆ ತಿಳಿಯಿತು. ಟೌತ್ವ ಪ್ರಾಪ್ತಿಯಾಯಿತು.

In ಟಾ_ರಸನ ಕಥೆಗಳು on September 28, 2006 by ಶೂನ್ಯ ಸಂಪಾದಕ
ಟಾ_ರಸ ಪೇಟೆಯ ನಡುವಣ ಬೀದಿಯಲ್ಲಿ ಹೋಗುತ್ತಿದ್ದಾಗ ಯಾರೋ ಗಟ್ಟಿ ಧ್ವನಿಯಲ್ಲಿ ಪ್ರವಚನ ನೀಡುತ್ತಿರುವುದು ಕೇಳಿಸಿತು. ಧ್ವನಿಯ ಮೂಲ ಹುಡುಕಿ ಹೋದರೆ ದೊಡ್ಡ ಮೈದಾನದಲ್ಲಿ ಶ್ರೀಶ್ರೀಗಳಾದವರೊಬ್ಬರು ರತ್ನಖಚಿತ ಪೀಠವೊಂದರ ಮೇಲೆ ಕುಳಿತು ಇಹಲೋಕದ ನಶ್ವರತೆಯ ಬಗ್ಗೆ ಪ್ರವಚನ ನೀಡುತ್ತಿದ್ದರು. ಟಾ_ರಸ ಇದನ್ನು ಆಲಿಸಿದ. ಶ್ರೀಶ್ರೀಗಳಾದವರು ಇಹಲೋಕ ಹೇಗೆ ಶಾಪಗ್ರಸ್ತವಾಗಿದೆ ಎಂಬುದನ್ನು ವಿವರಿಸುತ್ತಾ ಇಹದ ಕಷ್ಟಗಳನ್ನು ಶಪಿಸಿ ಪರದ ಸುಖವನ್ನು ವರ್ಣಿಸಿದರು.
ಇದನ್ನು ಕೇಳಿ ಸುಸ್ತಾದ ಟಾ_ರಸ ಎದ್ದು ಹೊರಡುವ ಹೊತ್ತಿಗೆ ಪಕ್ಕದಲ್ಲಿ ಕುಳಿತಿದ್ದವನೊಬ್ಬ `ಇಹಲೋಕ ಎಷ್ಟು ಶಾಪಗ್ರಸ್ತ!’ ಎಂದು ಉದ್ಗರಿಸಿದ.
ಟಾ_ರಸ ಕುಳಿತಲ್ಲಿಂದ ಮೇಲೇಳುತ್ತಾ `ನೀವೇನೂ ಕಂಗಾಲಾಗಬೇಡಿ. ಅವರು ಹೇಳಿದ ಇಹಲೋಕಕ್ಕೆ ನಾವಿರುವ ಇಹಲೋಕಕ್ಕೂ ಯಾವ ಸಂಬಂಧವೂ ಇಲ್ಲ’ ಎಂದ.

In ಟಾ_ರಸನ ಕಥೆಗಳು on September 27, 2006 by ಶೂನ್ಯ ಸಂಪಾದಕ
ಆಲ್_ಹಾಲ್‌ರ ಬಳಿ ಶಿಕ್ಷಣ ಪಡೆಯುವ ಕ್ರಿಯೆ ಮುಗಿದ ನಂತರವೂ ಟಾ_ರಸ ಕೆಲವೊಮ್ಮೆ ಆಶ್ರಮಕ್ಕೆ ಬಂದು ವಿದ್ಯಾರ್ಥಿಯಂತೆ ಅಲ್ಲಿ ಉಳಿದುಕೊಂಡಿರುತ್ತಿದ್ದ. ಆದರೆ ಆಲ್_ಹಾಲ್‌ರಲ್ಲಿದ್ದ ವಿದ್ಯಾರ್ಥಿಗಳಿಗೆಲ್ಲಾ ಟಾ_ರಸನ ಬಗ್ಗೆ ತಿಳಿದಿದ್ದರಿಂದ ಅವನನ್ನು ಬಹಳ ಗೌರವದಿಂದ ಕಾಣುತ್ತಿದ್ದರು. ಇವರೆಲ್ಲರಿಗೂ ಟಾ_ರಸನ ಇತಿಹಾಸ ತಿಳಿಯುವ ಆಸಕ್ತಿ.
ಒಮ್ಮೆ ಕೆಲವರು ಬಂದು ಟಾ_ರಸನನ್ನು ಭೇಟಿಯಾಗಿ `ನೀವು ಮೊದಲು ಗುರುಗಳ ಬಳಿಗೆ ಬಂದದ್ದು ಹೇಗೆ?’ ಎಂದು ಕೇಳಿದರು.
ಟಾ_ರಸ ಉತ್ತರಿಸಿದ: `ನಾನು ದರೋಡೆಕೋರನಾಗಲು ನಿರ್ಧರಿಸಿದೆ. ನಿರ್ಧರಿಸದ ದಿನ ರಾತ್ರಿಯೇ ನನ್ನ ಕಾರ್ಯಾಚರಣೆ ಆರಂಭಿಸಿದೆ. ರಸ್ತೆ ಬದಿಯ ತಿರುವಿನಲ್ಲಿ ನಿಂತು ಕಾಯುತ್ತಿದ್ದಾಗ ಒಬ್ಬಾತ ಬಂದ. ನಾನು ಖಡ್ಗ ಹಿರಿದು ಅವನ ಕಣ್ಣಲ್ಲಿ ಕಣ್ಣಿಟ್ಟಾಗ ಅಲ್ಲಿ ನಾನು ಹಿಂದೆಂದೂ ಕಾಣದ ಭಯವೊಂದು ಕಾಣಿಸಿತು. ಅದು ಯಾವ ಭಯವೆಂದು ಹುಡುಕುತ್ತಾ ಹೊರಟೆ. ಗುರುಗಳ ಬಳಿ ಬಂದ ಮೇಲೆ ಅದು `ಜೀವ ಭಯ’ವೆಂದು ತಿಳಿಯಿತು. ಮುಂದೆ ಜೀವ ಭಯದ ರಹಸ್ಯವನ್ನು ಹುಡುಕಲಾರಂಭಿಸಿದೆ’

In ಟಾ_ರಸನ ಕಥೆಗಳು on September 22, 2006 by ಶೂನ್ಯ ಸಂಪಾದಕ
ಟಾ_ರಸ ಒಂದು ಮಧ್ಯಾಹ್ನ ಮೀನು ಹಿಡಿಯ ಬೇಕೆಂದು ತೀರ್ಮಾನಿಸಿ ಹೊರಟ. ಆಲ್_ಹಾಲ್‌ನ ಆಶ್ರಮದಲ್ಲಿದ್ದ ಮತ್ತೊಬ್ಬ ಮತ್ಸ್ಯ ಪ್ರೇಮಿ ಶಿಷ್ಯನೂ ಟಾ_ರಸನಿಗೆ ಜತೆಯಾದ. ನದಿ ದಂಡೆಯ ಮೇಲೆ ನಡೆಯುತ್ತಾ ಗಾಳ ಹಾಕಲು ಸೂಕ್ತ ಜಾಗ ಹುಡುಕುತ್ತಿರುವಾಗ ಟಾ_ರಸ ಜೊತೆಗಾರನನ್ನು ಕರೆದು `ನೋಡು ಈ ಮೀನುಗಳು ಎಷ್ಟು ಸಂತೋಷದಿಂದ ಈಜಾಡುತ್ತಿವೆ’ ಎಂದ.
ಟಾ_ರಸ ಮೀನು ಹಿಡಿಯುವನ್ನು ವಿರೋಧಿಸುತ್ತಿದ್ದಾನೆ ಎಂದು ಕೊಂಡ ಆತ `ನೀನು ಮೀನಲ್ಲದೇ ಇರುವುದರಿಂದ ಅವು ಸಂತೋಷದಿಂದ ಇವೆಯೋ, ದುಃಖದಲ್ಲಿವೆಯೋ ಎಂದು ನಿನಗೆ ಹೇಳಲು ಸಾಧ್ಯವಿಲ್ಲ’
ಟಾ_ರಸ ಹೇಳಿದ: `ನಾನಲ್ಲದೇ ಇರುವ ನಿನಗೆ ಮೀನುಗಳು ಸಂತೋಷವಾಗಿರುವುದು ನನಗೆ ಗೊತ್ತಿಲ್ಲ ಎಂದು ಹೇಳುವುದು ಹೇಗೆ ಸಾಧ್ಯ?’