Archive for October, 2006

Post

ಕಳ್ಳ, ಕಳವು

In ಆಲ್_ಹಾಲ್ ನ ಕಥೆಗಳು on October 2, 2006 by ಶೂನ್ಯ ಸಂಪಾದಕ

ಆಲ್‌_ಹಾಲ್‌ನ ಶಿಷ್ಯನಾಗಿದ್ದ ಕಾಲದಲ್ಲಿ ಟಾ_ರಸನ ಮೇಲೆ ಹಲವು ಕಳವಿನ ಆರೋಪಗಳಿದ್ದವು. ಆಲ್‌_ಹಾಲ್‌ನ ಉಳಿದ ಶಿಷ್ಯರು ಸದಾ ಟಾ_ರಸ ಇಂದು ಏನನ್ನು ಕದ್ದ ಎಂದು ಹೋಗಿ ಗುರುಗಳಿಗೆ ವರದಿ ಒಪ್ಪಿಸುವುದು ನಡೆದೇ ಇತ್ತು.

ಆಲ್‌_ಹಾಲ್‌ ಈ ದೂರುಗಳನ್ನು ದೂರುಗಳನ್ನು ಗಂಭೀರವಾಗಿ ಕೇಳಿಸಿಕೊಂಡು ಆಮೇಲೆ ಮರೆತು ಬಿಡುತ್ತಿದ್ದ. ಒಂದು ದಿನ ಆಲ್‌_ಹಾಲ್‌ನ ಹೆಂಡದ ಬುರುಡೆ ಕಾಣೆಯಾಯಿತು. ಧ್ಯಾನದ ಹೊತ್ತಿನ ಅಗತ್ಯಗಳಲ್ಲಿ ಒಂದಾಗಿದ್ದ ಇದು ಕಾಣೆಯಾದುದನ್ನು ಕಂಡು ಶಿಷ್ಯ ವೃಂದವೆಲ್ಲಾ ಗಾಬರಿಯಾಯಿತು. ಧ್ಯಾನದ ಹೊತ್ತು ಬಂದಾಗ ಇದು ಆಲ್‌_ಹಾಲ್‌ಗೂ ತಿಳಿಯಿತು. ಈ ಹಿಂದೆ ಟಾ_ರಸನ ವಿರುದ್ಧ ಕಳವಿನ ದೂರು ನೀಡಿದ್ದ ಶಿಷ್ಯರೆಲ್ಲಾ ಈಗ ಮತ್ತೆ ಜಾಗೃತರಾದರು.

`ನಾವು ಹಿಂದೆಯೇ ಹೇಳಿದ್ದೆವು. ನೀವಾಗ ಕೇಳಲಿಲ್ಲ. ಈಗ ಏನಾಯಿತು ನೋಡಿ. ನಿಮ್ಮ ಹೆಂಡದ ಬುರುಡೆಯನ್ನೇ ಟಾ_ರಸ ಕದ್ದಿದ್ದಾನೆ. ಈಗಲಾದರೂ ನಿಮಗೆ ನಾವು ಹೇಳುತ್ತಿದುದು ಎಷ್ಟು ಗಂಭೀರವಾದ ವಿಚಾರ ಎಂಬುದು ಅರ್ಥವಾಗಿರಬೇಕು’ ಎಂದು ಏಕ ಕಂಠದಲ್ಲಿ ಘೋಷಿಸಿದರು.

ಆಲ್‌_ಹಾಲ್‌ ಪ್ರತಿಕ್ರಿಯಿಸಿದ: `ನೀವು ಹೇಳಿದ ಉಳಿದೆಲ್ಲವನ್ನೂ ಟಾ_ರಸ ಕದ್ದಿರಬಹುದು. ಏಕೆಂದರೆ ಅವ್ಯಾವೂ ಅವನ ಬಳಿ ಇರಲಿಲ್ಲ. ಆದರೆ ಹೆಂಡ ಬುರುಡೆಯನ್ನು ಆತ ಕದಿಯಲು ಸಾಧ್ಯವಿಲ್ಲ. ಏಕೆಂದರೆ ಅದು ಆತನ ಒಳಗೇ ಇದೆ’.