Archive for March, 2007

Post

ನೀರಿನಲ್ಲಿ ನಡೆಯುವ ವಿದ್ಯೆ

In ಟಾ_ರಸನ ಕಥೆಗಳು on March 25, 2007 by ಶೂನ್ಯ ಸಂಪಾದಕ

ಟಾ_ರಸ  ಒಂದು ದಿನ ಆಲ್‌_ಹಾಲ್‌ರ ಆಶ್ರಮದ ಬದಿಯಲ್ಲಿ ಹರಿಯುತ್ತಿದ್ದ ನದಿಯ ಆಚೆ ದಡದಲ್ಲಿ ತನ್ನೊಬ್ಬ ಗೆಳೆಯನೊಂದಿಗೆ ಧ್ಯಾನಕ್ಕೆ ಕುಳಿತ. ನೊರೆಯುಕ್ಕುವ ಹೆಂಡದ ಬುರುಡೆಯೊಂದಿಗೆ ಕುಳಿತಿದ್ದಾಗ ಪಶ್ಚಿಮ ದೇಶದ ಸಾಧಕನೊಬ್ಬ ಆಲ್‌_ಹಾಲ್‌ರ ಆಶ್ರಮದ ದಾರಿ ಕೇಳಿಕೊಂಡು ಬಂದ. ನದಿಯಾಚೆ ಇದ್ದ ಆಶ್ರಮವನ್ನು ತೋರಿಸಿ ಈ ಗೆಳೆಯರು ಮತ್ತೆ ಧ್ಯಾನಮಗ್ನರಾದರು.

ನದಿಯ ಅಗಲ ನೋಡಿ ಆ ಸಾಧಕ ಅಲ್ಲೇ ಕುಳಿತ. ಈ ಹೊತ್ತಿಗೆ ಏನೋ ನೆನಪಾದವನಂತೆ ಮೇಲೆದ್ದ ಟಾ_ರಸನ ಗೆಳೆಯ ನೀರಿನ ಮೇಲೆ ನಡೆಯುತ್ತ ಆಶ್ರಮದವರೆಗೆ ಹೋಗಿ ಒಂದು ಬುರುಡೆ ಹೆಂಡ ತಂದು ಆ ಸಾಧಕನ ಎದುರು ಇಟ್ಟ..

ಸಾಧಕ ಹೆಂಡ ಸೇವನೆ ಆರಂಭಿಸಿದಾಗ ಅವನಿಗೆ ತಿನ್ನಲು ಏನೂ ಇಲ್ಲ ಎಂದು ಟಾ_ರಸನಿಗೆ ನೆನಪಾಯಿತು.

ಅವನೂ ನೀರಿನ ಮೇಲೆ ನಡೆದು ಹೋಗಿ ಒಂದಷ್ಟು ಆಹಾರ ತಂದ. ಇವರಿಬ್ಬರೂ ನೀರಿನ ಮೇಲೆ ನಡೆಯುವುದನ್ನು ಕಂಡ ಆ ಪಶ್ಚಿಮದ ಸಾಧಕ ತನ್ನ ಸಾಧನೆ ತೋರಿಸಲು ನೀರಿನ ಮೇಲೆ ನಡೆಯಲು ಹೊರಟ. ನೀರಿನ ಮೇಲೆ ಕಾಲಿಟ್ಟ ತಕ್ಷಣ ಆತ  ಮುಳುಗುತ್ತಿದ್ದ. ಮತ್ತೆ ಎದ್ದು ನಿಂತು ನೀರಿನ ಮೇಲೆ ನಡೆದೇ ಬಿಡಲು ತಾನು ಕಲಿತ ಯೋಗ ವಿದ್ಯೆಯನ್ನೆಲ್ಲಾ ನೆನಪಿಸಿಕೊಂಡು ಪ್ರಯತ್ನಿಸಿದ. ವೈಫಲ್ಯದ ಪರಂಪರೆಯೇ ಮುಂದುವರಿಯಿತು.

ತಮ್ಮ ಅತಿಥಿಯ ಪಾಡನ್ನು ನೋಡುತ್ತಿದ್ದ ಟಾ_ರಸನಿಗೆ ಸಮಸ್ಯೆ ಅರ್ಥವಾಯಿತು. ತನ್ನ ಗೆಳೆಯನನ್ನು ಕರೆದು ‘ಅವನಿಗೆ ನದಿ ದಾಟಿ ಆಚೆ ಹೋಗಲಿಕ್ಕಿರಬಹುದು. ನಾವು ದಾಟಿದ ಸೇತುವೆ ನೀರು ಹರಿಯುತ್ತಿರುವುದು ಅವನಿಗೆ ಗೊತ್ತಾಗಲಿಲ್ಲ ಅನ್ನಿಸುತ್ತಿದೆ. ಅದನ್ನು ತೋರಿಸು’ ಎಂದ.

Post

ದೇವರ ಜತೆಗಿನ ಜಗಳ

In ಆಲ್_ಹಾಲ್ ನ ಕಥೆಗಳು on March 23, 2007 by ಶೂನ್ಯ ಸಂಪಾದಕ

ಲೋಕ ಸಂಚಾರಕ್ಕೆಂದು ಹೊರಟಿದ್ದ ಟಾ_ರಸ ಮತ್ತು ಗುರು ಆಲ್_ಹಾಲ್ ಆ ಮರಳುಗಾಡಿನಲ್ಲಿ ಅವರಿಗೆ ಪರಿಚಿತವಾಗಿದ್ದ ಓಯಸಿಸ್ ಬಳಿಗೆ ಬಂದಾಗ ಅದೂ ಬರಡಾಗಿತ್ತು. ಅಲ್ಲಿನ ಜನರೆಲ್ಲಾ ಕಂಗಾಲಾಗಿದ್ದರು.

ಗುರು ಆಲ್_ಹಾಲ್ ರನ್ನು ಕಂಡದ್ದೇ ತಡ ಅವರಲ್ಲೊಂದು ಆಶಾವಾದ ಮೂಡಿದು. ಗುರುಗಳು ಹೇಗಾದರೂ ಮಾಡಿ ಮಳೆ ಬರಿಸಬಹುದೆಂದು ಅವರಲ್ಲಿಗೆ ಬಂದು ಮಳೆ ಬರುವಂತೆ ದೇವರಲ್ಲಿ ಪ್ರಾರ್ಥಿಸಬೇಕೆಂದು ವಿನಂತಿಸಿದರು.

ಗುರು  ಆಲ್_ಹಾಲ್ ಹೇಳಿದರು ‘ನನಗೂ ದೇವರಿಗೂ ಜಗಳವಾಗಿದೆ. ಈಗ ನಾನೇನೂ ಕೇಳುವ ಸ್ಥಿತಿಯಲ್ಲಿ ಇಲ್ಲ’

ಓಯಸಿಸ್ ನ ಜನರು ಮಳೆ ಬರಿಸಲೇಬೇಕೆಂದು ಒತ್ತಾಯಿಸಿದರು. ಗುರು ಆಲ್_ಹಾಲ್  ಏನೋ ತೀರ್ಮಾನಿಸಿದವರಂತೆ ಹೆಗಲ ಮೇಲಿದ್ದ ಬಟ್ಟೆಯನ್ನು ತೆಗೆದು ಕಮಂಡಲದ ನೀರಿಗೆ ಅದ್ದಿ ಒದ್ದೆಯಾಗಿಸಿ ಹಿಂಡಿ ಹತ್ತಿರದಲ್ಲೇ ಇದ್ದ ಮುಳ್ಳುಕಂಟಿಯ ಮೇಲೆ ಒಣಗಿಸಲು ಹರಡಿದರು.

ಕೆಲವೇ ಕ್ಷಣದಲ್ಲಿ ಆಕಾಶದಲ್ಲಿ ಮೋಡಗಟ್ಟಿತು. ಜೋರಾಗಿ ಮಳೆ ಸುರಿಯಿತು.

Post

ವಿಕಾಸವಾದ

In ಆಲ್_ಹಾಲ್ ನ ಕಥೆಗಳು on March 2, 2007 by ಶೂನ್ಯ ಸಂಪಾದಕ

ಗುರು ಆಲ್_ಹಾಲ್ ಅವರ ಆಶ್ರಮದಲ್ಲಿ ಒಂದು ಬೆಕ್ಕು ಇತ್ತು. ಇದರೆದುರು ಏನನ್ನು ಕುಡಿಯಲು ಇಟ್ಟರೂ ಅದು ಪಾತ್ರೆಯನ್ನು ಉರುಳಿಸಿ ಪಾತ್ರೆಯೊಳಗಿರುವುದನ್ನು ನೆಲಕ್ಕೆ ಚೆಲ್ಲಿ ಆಮೇಲೆ ಅದನ್ನು ನೆಕ್ಕುತ್ತಿತ್ತು. ಇದನ್ನು ಕಂಡ ಶಿಷ್ಯರೆಲ್ಲರೂ ಅದನ್ನೊಂದು ದಡ್ಡ ಬೆಕ್ಕು ಎಂದು ತೀರ್ಮಾನಿಸಿಬಿಟ್ಟಿದ್ದರು.

ಒಂದು ದಿನ ಆಲ್_ಹಾಲ್ ಅವರು ವಿಕಾಸವಾದದ ಬಗ್ಗೆ ಹೇಳುತ್ತ ಆಶ್ರಮದಲ್ಲಿರುವ ಬೆಕ್ಕು ವಿಕಾಸವಾದ ಹೇಗೆ ಕೆಲಸ ಮಾಡುತ್ತದೆ ಎಂಬುದಕ್ಕೆ ಅತ್ಯುತ್ತಮ ಉದಾಹರಣೆ ಎಂದುಬಿಟ್ಟರು. ಶಿಷ್ಯರೆಲ್ಲಾ ಗಾಬರಿಯಾಗಿ ಈ ಬೆಕ್ಕು ವಿಕಾಸದ ಹಾದಿಯಲ್ಲಿ ಹಿಂದಕ್ಕೆ ಚಲಿಸಿರಬೇಕು ಎಂದು ಭಾವಿಸಿ “ವಿಕಾಸ ಎಂದರೆ ಹಿಂದಕ್ಕೆ ಚಲಿಸುವುದೇ ಎಂದು ಪ್ರಶ್ನಿಸಿದರು.”

ಗುರುಗಳಿಗೆ ಶಿಷ್ಯರ ಮನದಿಂಗಿತ ಅರ್ಥವಾಗಿ “ಬೆಕ್ಕು ಹಿಂದಕ್ಕೆ ಚಲಿಸಿಲ್ಲ. ಅದು ಮುಂದಕ್ಕೇ ಚಲಿಸಿದೆ. ಈ ಬೆಕ್ಕಿನ ಪೂರ್ವಜನಾದ ಬೆಕ್ಕೊಂದು ಭಾರತ ದೇಶದ ಸಾಮ್ರಾಟನಲ್ಲಿ ಒಬ್ಬನಾದ ಕೃಷ್ಣದೇವರಾಯನ ಆಸ್ಥಾನದಲ್ಲಿದ್ದ ವಿದೂಷಕ ತೆನಾಲಿ ರಾಮನ ಮನೆಯಲ್ಲಿದ್ದ. ಅಲ್ಲಿ ಒಮ್ಮೆ ಬಿಸಿ ಹಾಲು ಕುಡಿದು ಗಂಟಲು ಸುಟ್ಟುಕೊಂಡ ಮೇಲೆ ಅವನ ಮುಂದಿನ ತಲೆಮಾರು ಗಂಟಲು ಸುಟ್ಟುಕೊಳ್ಳಗೇ ದ್ರವಾಹಾರವನ್ನು ತೆಗೆದುಕೊಳ್ಳುವ ವಿಧಾನವನ್ನು ಆವಿಷ್ಕರಿಸಿತು.” ಎಂದರು.