Archive for 2007

Post

ಸೊಳ್ಳೆ ಸಂಹಾರ ಕಥನವು

In ಟಾ_ರಸನ ಕಥೆಗಳು on January 24, 2007 by ಶೂನ್ಯ ಸಂಪಾದಕ

ಟಾ_ರಸ ಒಬ್ಬ ಕ್ರೂರಿ ದರೋಡೆಕೋರನಿಗೆ ಸಾಂತ್ವನ ನೀಡಿದ ವಿಷಯ ವಿವಿಧ ರೂಪ ಪಡೆದು ಜನಜನಿತವಾಗಿತ್ತು. ಇದನ್ನು ಕೇಳಿದ ಕೆಲವು ಹಳ್ಳಿಗರು ಒಂದು ದಿನ ಬಂದು ಟಾ_ರಸನನ್ನು ಭೇಟಿಯಾಗಿ ತಮ್ಮ ಊರಿನ ಮೇಲೆ ಆಗಾಗ ದಾಳಿ ಮಾಡುವ ದರೋಡೆಕೋರರ ತಂಡವೊಂದರ ಬಗ್ಗೆ ತಿಳಿಸಿ ಅವರ ಕಾಟದಿಂದ ತಪ್ಪಿಸಬೇಕು ಎಂದು ವಿನಂತಿಸಿದರು. ಟಾ_ರಸ ಇದಕ್ಕೆ ಒಪ್ಪಿ ಆ ಹಳ್ಳಿಗೆ ಹೋದ. ಎಂದಿನಂತೆ ರಾತ್ರಿ ಅಲ್ಲಿದ್ದ ತಾಳೆ ಮರವೊಂದರ ಕೆಳಗೆ ನೊರೆಯುಕ್ಕುವ ಹೆಂಡದ ಬುರುಡೆಯೆದುರು ಟಾ_ರಸ ಧ್ಯಾನ ಮಗ್ನನಾಗಿದ್ದಾಗ ದರೋಡೆಕೋರರು ಅವನನ್ನು ಸುತ್ತುವರಿದರು. ಇದರ ಅರಿವೇ ಇಲ್ಲದಂತೆ ಟಾ_ರಸ ತನ್ನ ಊರುಗೋಲೆತ್ತಿಕೊಂಡು ಒಮ್ಮೆ ಗಾಳಿಯಲ್ಲಿ ತಿರುಗಿಸಿದ. ಹತ್ತು ಸೊಳ್ಳೆಗಳು ಸತ್ತು ಟಾ_ರಸನ ಹೆಂಡದ ಬುರುಡೆಯೆದುರು ಬಿದ್ದವು. ದರೋಡೆಕೋರರು ಮತ್ತೆ ಆ ಹಳ್ಳಿಯ ತಂಟೆಗೆ ಬರಲಿಲ್ಲ.

Post

ಗುರುವಿನ ಲಕ್ಷಣ

In ಟಾ_ರಸನ ಕಥೆಗಳು on January 23, 2007 by ಶೂನ್ಯ ಸಂಪಾದಕ

ಟಾ_ರಸ ಆಗಷ್ಟೇ ಬಂದು ಆಲ್‌_ಹಾಲ್‌ರ ಆಶ್ರಮಕ್ಕೆ ಸೇರಿದ್ದ. ಬಂದ ಕೆಲವೇ ದಿನಗಳಲ್ಲಿ ಆಶ್ರಮದ ಹಲವರಲ್ಲಿ ಪ್ರಶ್ನೆಗಳನ್ನು ಹುಟ್ಟಿಸಿದ್ದ ಟಾ_ರಸನನ್ನು ಕರೆದ ಗುರು ಆಲ್‌_ಹಾಲ್‌ ಅವನ ಕಿವಿಯಲ್ಲಿ `ವಿಮೋಚನಾ ಮಂತ್ರ’ ಬೋಧಿಸಿ `ಇದನ್ನು ನೀನು ಯಾರಿಗೂ ಹೇಳಬಾರದು. ಹೇಳಿದರೆ ನೀನು ಬಂಧನದಲ್ಲಿ ಸಿಲುಕಿ ನಿನ್ನಿಂದ ಕೇಳಿಸಿಕೊಂಡವರು ವಿಮೋಚಿತರಾಗುತ್ತಾರೆ’ ಎಂದು ಎಚ್ಚರಿಸಿ ಕಳುಹಿಸಿದರು.

ಅಲ್ಲಿಂದ ಹೊರಟ ಟಾ_ರಸ ಆಶ್ರಮದಲ್ಲಿದ್ದ ಎಲ್ಲ ವಿದ್ಯಾರ್ಥಿಗಳನ್ನೂ ಕರೆದು ಗುಂಪುಗೂಡಿಸಿ `ವಿಮೋಚನ ಮಂತ್ರ’ವನ್ನು ಉಚ್ಚ ಸ್ವರದಲ್ಸಿ ಹೇಳಿದ. ಈಗಾಗಲೇ ಆಲ್‌_ಹಾಲ್‌ರಿಂದ ವಿಮೋಚನ ಮಂತ್ರವನ್ನು ಅರಿತಿದ್ದ ಹಿರಿಯ ವಿದ್ಯಾರ್ಥಿಗಳು  ಹೋಗಿ ಆಲ್‌_ಹಾಲ್‌ಗೆ ದೂರು ಕೊಟ್ಟರು. ಅದಕ್ಕೆ ಅವರು  `ಅವನು ಗುರುವಾಗುವುದು ಖಚಿತ’ ಎಂದು ನಕ್ಕರು.