Archive for the ‘ಆಲ್_ಹಾಲ್ ನ ಕಥೆಗಳು’ Category

Post

ದೇವರ ಜತೆಗಿನ ಜಗಳ

In ಆಲ್_ಹಾಲ್ ನ ಕಥೆಗಳು on March 23, 2007 by ಶೂನ್ಯ ಸಂಪಾದಕ

ಲೋಕ ಸಂಚಾರಕ್ಕೆಂದು ಹೊರಟಿದ್ದ ಟಾ_ರಸ ಮತ್ತು ಗುರು ಆಲ್_ಹಾಲ್ ಆ ಮರಳುಗಾಡಿನಲ್ಲಿ ಅವರಿಗೆ ಪರಿಚಿತವಾಗಿದ್ದ ಓಯಸಿಸ್ ಬಳಿಗೆ ಬಂದಾಗ ಅದೂ ಬರಡಾಗಿತ್ತು. ಅಲ್ಲಿನ ಜನರೆಲ್ಲಾ ಕಂಗಾಲಾಗಿದ್ದರು.

ಗುರು ಆಲ್_ಹಾಲ್ ರನ್ನು ಕಂಡದ್ದೇ ತಡ ಅವರಲ್ಲೊಂದು ಆಶಾವಾದ ಮೂಡಿದು. ಗುರುಗಳು ಹೇಗಾದರೂ ಮಾಡಿ ಮಳೆ ಬರಿಸಬಹುದೆಂದು ಅವರಲ್ಲಿಗೆ ಬಂದು ಮಳೆ ಬರುವಂತೆ ದೇವರಲ್ಲಿ ಪ್ರಾರ್ಥಿಸಬೇಕೆಂದು ವಿನಂತಿಸಿದರು.

ಗುರು  ಆಲ್_ಹಾಲ್ ಹೇಳಿದರು ‘ನನಗೂ ದೇವರಿಗೂ ಜಗಳವಾಗಿದೆ. ಈಗ ನಾನೇನೂ ಕೇಳುವ ಸ್ಥಿತಿಯಲ್ಲಿ ಇಲ್ಲ’

ಓಯಸಿಸ್ ನ ಜನರು ಮಳೆ ಬರಿಸಲೇಬೇಕೆಂದು ಒತ್ತಾಯಿಸಿದರು. ಗುರು ಆಲ್_ಹಾಲ್  ಏನೋ ತೀರ್ಮಾನಿಸಿದವರಂತೆ ಹೆಗಲ ಮೇಲಿದ್ದ ಬಟ್ಟೆಯನ್ನು ತೆಗೆದು ಕಮಂಡಲದ ನೀರಿಗೆ ಅದ್ದಿ ಒದ್ದೆಯಾಗಿಸಿ ಹಿಂಡಿ ಹತ್ತಿರದಲ್ಲೇ ಇದ್ದ ಮುಳ್ಳುಕಂಟಿಯ ಮೇಲೆ ಒಣಗಿಸಲು ಹರಡಿದರು.

ಕೆಲವೇ ಕ್ಷಣದಲ್ಲಿ ಆಕಾಶದಲ್ಲಿ ಮೋಡಗಟ್ಟಿತು. ಜೋರಾಗಿ ಮಳೆ ಸುರಿಯಿತು.

Post

ವಿಕಾಸವಾದ

In ಆಲ್_ಹಾಲ್ ನ ಕಥೆಗಳು on March 2, 2007 by ಶೂನ್ಯ ಸಂಪಾದಕ

ಗುರು ಆಲ್_ಹಾಲ್ ಅವರ ಆಶ್ರಮದಲ್ಲಿ ಒಂದು ಬೆಕ್ಕು ಇತ್ತು. ಇದರೆದುರು ಏನನ್ನು ಕುಡಿಯಲು ಇಟ್ಟರೂ ಅದು ಪಾತ್ರೆಯನ್ನು ಉರುಳಿಸಿ ಪಾತ್ರೆಯೊಳಗಿರುವುದನ್ನು ನೆಲಕ್ಕೆ ಚೆಲ್ಲಿ ಆಮೇಲೆ ಅದನ್ನು ನೆಕ್ಕುತ್ತಿತ್ತು. ಇದನ್ನು ಕಂಡ ಶಿಷ್ಯರೆಲ್ಲರೂ ಅದನ್ನೊಂದು ದಡ್ಡ ಬೆಕ್ಕು ಎಂದು ತೀರ್ಮಾನಿಸಿಬಿಟ್ಟಿದ್ದರು.

ಒಂದು ದಿನ ಆಲ್_ಹಾಲ್ ಅವರು ವಿಕಾಸವಾದದ ಬಗ್ಗೆ ಹೇಳುತ್ತ ಆಶ್ರಮದಲ್ಲಿರುವ ಬೆಕ್ಕು ವಿಕಾಸವಾದ ಹೇಗೆ ಕೆಲಸ ಮಾಡುತ್ತದೆ ಎಂಬುದಕ್ಕೆ ಅತ್ಯುತ್ತಮ ಉದಾಹರಣೆ ಎಂದುಬಿಟ್ಟರು. ಶಿಷ್ಯರೆಲ್ಲಾ ಗಾಬರಿಯಾಗಿ ಈ ಬೆಕ್ಕು ವಿಕಾಸದ ಹಾದಿಯಲ್ಲಿ ಹಿಂದಕ್ಕೆ ಚಲಿಸಿರಬೇಕು ಎಂದು ಭಾವಿಸಿ “ವಿಕಾಸ ಎಂದರೆ ಹಿಂದಕ್ಕೆ ಚಲಿಸುವುದೇ ಎಂದು ಪ್ರಶ್ನಿಸಿದರು.”

ಗುರುಗಳಿಗೆ ಶಿಷ್ಯರ ಮನದಿಂಗಿತ ಅರ್ಥವಾಗಿ “ಬೆಕ್ಕು ಹಿಂದಕ್ಕೆ ಚಲಿಸಿಲ್ಲ. ಅದು ಮುಂದಕ್ಕೇ ಚಲಿಸಿದೆ. ಈ ಬೆಕ್ಕಿನ ಪೂರ್ವಜನಾದ ಬೆಕ್ಕೊಂದು ಭಾರತ ದೇಶದ ಸಾಮ್ರಾಟನಲ್ಲಿ ಒಬ್ಬನಾದ ಕೃಷ್ಣದೇವರಾಯನ ಆಸ್ಥಾನದಲ್ಲಿದ್ದ ವಿದೂಷಕ ತೆನಾಲಿ ರಾಮನ ಮನೆಯಲ್ಲಿದ್ದ. ಅಲ್ಲಿ ಒಮ್ಮೆ ಬಿಸಿ ಹಾಲು ಕುಡಿದು ಗಂಟಲು ಸುಟ್ಟುಕೊಂಡ ಮೇಲೆ ಅವನ ಮುಂದಿನ ತಲೆಮಾರು ಗಂಟಲು ಸುಟ್ಟುಕೊಳ್ಳಗೇ ದ್ರವಾಹಾರವನ್ನು ತೆಗೆದುಕೊಳ್ಳುವ ವಿಧಾನವನ್ನು ಆವಿಷ್ಕರಿಸಿತು.” ಎಂದರು.

Post

ಈಶಾಸಸ್ವ ಬೋಧಿಸಿದ ಜ್ಞಾನ

In ಆಲ್_ಹಾಲ್ ನ ಕಥೆಗಳು on February 6, 2007 by ಶೂನ್ಯ ಸಂಪಾದಕ

ಗುರು ಆಲ್‌_ಹಾಲ್‌ ಅವರ ಸಾಧನೆಯ ಬಗ್ಗೆ ಇದ್ದ ದಂತ ಕಥೆಗಳು ಅನೇಕ. ಅವರ ಬೋಧನಾ ಜ್ಞಾನವೂ ಅಷ್ಟೇ. ಇದನ್ನೆಲ್ಲಾ ಅವರು ಹೇಗೆ ಗಳಿಸಿದರು ಎಂಬುದಕ್ಕೆ ಸಂಬಂಧಿಸಿದಂತೆ ಇರುವ ಕಥೆ ಇಲ್ಲಿದೆ.

ಅದು ಗುರು ಆಲ್‌_ಹಾಲ್‌ ಜ್ಞಾನಾನ್ವೇಷಣೆಯಲ್ಲಿ ಸಂಚಾರ ನಡೆಸುತ್ತಿದ್ದ ಕಾಲಘಟ್ಟ. ಈ ಸಂಚಾರದ ವೇಳೆ ಅವರು ಭಾರತಕ್ಕೆ ಬಂದರು. ಆ ಕಾಲದಲ್ಲಿ ಭಾರತದಲ್ಲಿದ್ದ ಈಶಾಸತ್ವ ಎಂಬ ಮಹಾ ಜ್ಞಾನಿಯೊಬ್ಬಳ ಬಳಿಗೆ ಆಲ್‌_ಹಾಲ್‌ ಮಾರ್ಗದರ್ಶನ ಪಡೆಯಲು ಹೋದರು.

ಆಲ್‌_ಹಾಲ್‌ ಹೋದಾಗ ಈಶಾಸತ್ವ ಈಚಲ ಮರದ ಕೆಳಗೆ ಕುಳಿತು ಹರಟೆ ಹೊಡೆಯುತ್ತಿದ್ದಳು. ಆಲ್‌_ಹಾಲ್‌ರನ್ನು ನೋಡಿದ ಆಕೆ `ಕೇಳು’ ಎಂದಳು.

ಆಲ್‌_ಹಾಲ್‌ ಪ್ರಶ್ನಿಸಿದರು. `ಶಬ್ದಗಳನ್ನು ಬಳಸದೆ, ಶಬ್ದವನ್ನು ಬಳಸದೆಯೂ ಇರದೆ ಸತ್ಯವನ್ನು ಹೇಳುವುದು ಹೇಗೆ?’
ಈಶಾಸತ್ವ ಮೌನವಾಗಿದ್ದಳು.

ಆಲ್‌_ಹಾಲ್‌ `ಮಹಾತಾಯಿ ನೀನು ನೀಡಿದ ಅರಿವಿಗೆ ನಾನು ಕೃತಜ್ಞ’ ಎಂದು ಸಾಷ್ಟಾಂಗ ವಂದಿಸಿ ಅಲ್ಲಿಂದ ಹೊರಟರು.

ಕತೆಯನ್ನು ಅರ್ಥ ಮಾಡಿಕೊಳ್ಳದ ಯಾರೋ ಟಾ_ರಸನಲ್ಲಿ  ಅರ್ಥವಿವರಿಸಬೇಕು ಎಂದಾಗ ಆತನೂ ಮೌನವಾಗಿದ್ದನಂತೆ.

Post

ತುಂಬಿದ ಬುರುಡೆ

In ಆಲ್_ಹಾಲ್ ನ ಕಥೆಗಳು on January 30, 2007 by ಶೂನ್ಯ ಸಂಪಾದಕ

ಗುರು ಆಲ್‌_ಹಾಲ್‌ರ ಬಳಿ ಉಪದೇಶ ಮತ್ತು ಶಿಷ್ಯತ್ವ ಯಾಚಿಸಿ ಬರುವವರ ಸಂಖ್ಯೆ ಬಹಳ ದೊಡ್ಡದಿತ್ತು. ಈ ಸಂಖ್ಯೆಯಿಂದ ಅವರೇನೂ ವಿಚಲಿತರಾಗಿರಲಿಲ್ಲ. ನಿಜವಾದ ವಿದ್ಯಾರ್ಥಿಯನ್ನು ಆರಿಸುವ ಕಲೆ ಅವರಿಗೆ ಗೊತ್ತಿತ್ತು. ಅವರ ಆಯ್ಕೆಯ ವಿಧಾನಕ್ಕೆ ಸಂಬಂಧಿಸಿದ ಒಂದು ಕತೆ ಇಲ್ಲಿದೆ.

ಒಮ್ಮೆ ದೂರ ದೇಶದಿಂದ ಒಬ್ಬ ವಿದ್ವಾಂಸ ಆಲ್‌_ಹಾಲ್‌ ಆಶ್ರಮಕ್ಕೆ ಬಂದ. ಆತನ ಉದ್ದೇಶ ಸರಳವಾಗಿತ್ತು. ಆಲ್‌_ಹಾಲ್‌ ಅವರ ಶಿಷ್ಯ ವೃತ್ತಿ ಮಾಡಿ `ಟೌತ್ವ’ ಗಳಿಸುವುದು. ಆಲ್‌_ಹಾಲ್‌ರ ಬಗ್ಗೆ ಮೊದಲೇ ಅಧ್ಯಯನ ನಡೆಸಿ ಪರೀಕ್ಷೆಗೆ ಸಿದ್ಧನಾಗಿದ್ದ.

ಆಲ್‌_ಹಾಲ್‌ ಈತನನ್ನು ಕರೆದು ಕುಶಲ ಮಾತನಾಡಿ ಪೂರ್ವಾಪರ ವಿಚಾರಿಸಿದರು. ಆತ ತನ್ನ ಬಗ್ಗೆ ಹೇಳಿಕೊಳ್ಳಲು ಆರಂಭಿಸಿದ. ಈ ಹೊತ್ತಿಗೆ ಸರಿಯಾಗಿ ಆಲ್‌_ಹಾಲ್‌ರ ಶಿಷ್ಯ ಹೆಂಡದ ಎರಡು ಹೆಂಡದ ಬುರುಡೆಗಳನ್ನೂ ತಂದಿಟ್ಟ.

ಆಲ್‌_ಹಾಲ್‌ ತಮ್ಮ ಹೆಂಡದ ಬುರುಡೆಯಿಂದ ವಿದ್ವಾಂಸನ ಎದುರಿದ್ದ ತುಂಬಿದ ಹೆಂಡದ ಬುರುಡೆಗೆ ಹೆಂಡ ಸುರಿಯ ತೊಡಗಿದರು. ಅದು ಚೆಲ್ಲಿ ಹೊರಗೆ ಹರಿವಾಗ ಆತ ಕೇಳಿದ `ಇದೇನು ಗುರುಗಳೇ?’

`ಏನಿಲ್ಲಾ ನನ್ನ ಬಳಿ ನೀನು ಕಲಿಯಲು ಬಂದಿರುವುದೂ ಇದೇ ಅವಸ್ಥೆಯಲ್ಲಿ’ ಎಂದು ಆಲ್‌_ಹಾಲ್‌ ಉತ್ತರಿಸಿದರು.

Post

ನೆನಪಿಡುವ ಯಂತ್ರ

In ಆಲ್_ಹಾಲ್ ನ ಕಥೆಗಳು on January 28, 2007 by ಶೂನ್ಯ ಸಂಪಾದಕ

ಗುರು ಆಲ್‌_ಹಾಲ್‌ ಅವರ ಆಶ್ರಮಕ್ಕೆ ಪಶ್ಚಿಮದ ಸಾಧಕನೊಬ್ಬನ ಆಗಮನವಾಯಿತು. ಇವನು ಈವರೆಗೂ ಬಂದಿದ್ದ ಪಶ್ಚಿಮದ ಸಾಧಕರೆಲ್ಲರಿಗಿಂತ ಭಿನ್ನನಾಗಿದ್ದ. ತನ್ನ ಸಾಧನೆಗಳ ಬಗ್ಗೆ ಆತ ಏನನ್ನೂ ಹೇಳಲಿಲ್ಲ. ಬದಲಿಗೆ ಆ ಸಾಧನೆಗಳು ಅಷ್ಟೇನೂ ಮುಖ್ಯವಲ್ಲ. ಅದಕ್ಕಾಗಿಯೇ ನಾನು ಆಲ್‌_ಹಾಲ್‌ ಅವರ ಮಾರ್ಗದರ್ಶನದಲ್ಲಿ ಕಲಿಯಲು ಬಂದಿದ್ದೇನೆ ಎಂದು ಹೇಳಿಕೊಳ್ಳುತ್ತಿದ್ದ.

ಬಂದ ದಿನ ಅವನಿಗೆ ಗುರುಗಳನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ. ಮರು ದಿನ ಸಂಜೆಯ ಧ್ಯಾನದ ವೇಳೆ ಗುರುಗಳು ಅವನನ್ನು ಬರಲು ಹೇಳಿಕಳುಹಿಸಿದರು. ಆತ ಗುರುಗಳೆದುರು ನಿಂತು ತಾನು ವಿದ್ಯಾರ್ಥಿಯಾಗಿ ಬಂದಿದ್ದೇನೆ ಎಂದು ಪರಿಚಯಿಸಿಕೊಂಡ. ಗುರು ಆಲ್‌_ಹಾಲ್‌ `ನಿನ್ನ ಈವರೆಗಿನ ಕಲಿಕೆಯ ಬಗ್ಗೆ ಹೇಳು’ ಎಂದರು.

ಆ ಪಶ್ಚಿಮದ ಸಾಧಕ ತಾನು ಕಲಿತ ಧರ್ಮ ಗ್ರಂಥದ ಸಾಲುಗಳನ್ನು ಪಠಿಸುತ್ತಾ ಹೋದ.

ಇದನ್ನು ಕೇಳಿದ ಆಲ್‌_ಹಾಲ್‌ ಕೋಪದಿಂದ `ಮೂರ್ಖ ನೀನು ಈವರೆಗೆ ಬರೇ ನೆನಪಿಡುವುದನ್ನು ಮಾತ್ರ ಕಲಿತದ್ದೇ?’ ಎಂದು ಪ್ರಶ್ನಿಸಿದ.

ಪಶ್ಚಿಮದ ಸಾಧಕನಿಗೆ `ಟೌತ್ವ’ದ ರಹಸ್ಯ ತಿಳಿಯಿತು.

Post

ರೂಪಕದ ಅರ್ಥ

In ಆಲ್_ಹಾಲ್ ನ ಕಥೆಗಳು on October 10, 2006 by ಶೂನ್ಯ ಸಂಪಾದಕ

ಟಾ_ರಸ ರೂಪಕಗಳಲ್ಲಿ ಉತ್ತರ ಕೊಡುವುದರಲ್ಲಿ ಪ್ರವೀಣ. ಅವನಿಗೆ ಎದುರಾಗುವ ಎಲ್ಲಾ ಪ್ರಶ್ನೆಗಳನ್ನೂ ಅವು ವಿಶಿಷ್ಟವಾಗಿ ಗ್ರಹಿಸಿ ರೂಪಕಗಳಲ್ಲಿ ಉತ್ತರಿಸುತ್ತಿದ್ದುದರಿಂದ ಅನೇಕರಿಗೆ ಅವು ಅರ್ಥವಾಗುತ್ತಿರಲಿಲ್ಲ. ವರ್ತಮಾನದಲ್ಲೂ ಟಾ_ರಸನ ಕತೆಗಳನ್ನು ಕೇಳುವ, ಓದುವ ಅನೇಕರು ಕತೆಗಳು ಅರ್ಥವಾಗಲಿಲ್ಲ ಎಂದು ತಿಣುಕಾಡುತ್ತಾರೆ.

ಟಾ_ರಸನ ಗುರುಗಳಾದ ಆಲ್‌_ಹಾಲ್‌ರ ಶಿಷ್ಯರಿಗೂ ಇದೇ ಸಮಸ್ಯೆ ಕಾಡಿ ಅವರು ಗುರುಗಳ ಬಳಿಗೆ ಹೋದರು. `ತಾವೇನೋ ಟಾ_ರಸನ ಉತ್ತರಗಳು, ಸಾಮಿತಿಗಳು, ದೃಷ್ಟಾಂತಗಳನ್ನು ಹೊಗಳುತ್ತೀರಿ. ಆತ ಯಾವತ್ತೂ ಅವುಗಳ ಅರ್ಥವನ್ನು ವಿವರಿಸಲೇ ಇಲ್ಲ’ ಎಂದರು.

ಇದನ್ನು ಕೇಳಿ ನಕ್ಕ ಆಲ್‌_ಹಾಲ್‌ `ನಿಮಗೆ ತಿನ್ನಲೆಂದು ಹಣ್ಣನ್ನು ಕೊಡುವವರು ಅದನ್ನು ಅಗಿದು ಕೊಟ್ಟರೆ ನಿಮಗೇನನ್ನಿಸುತ್ತದೆ?’ ಎಂದು ಪ್ರಶ್ನಿಸಿದರು.

Post

ಯಾವ ಇತರರು?

In ಆಲ್_ಹಾಲ್ ನ ಕಥೆಗಳು on October 5, 2006 by ಶೂನ್ಯ ಸಂಪಾದಕ

ಆಲ್‌_ಹಾಲ್‌ ಅವರ ಬಳಿಗೆ ಉಪದೇಶ ನಿರೀಕ್ಷಿಸಿ ಹಲವರು ಬರುತ್ತಿದ್ದರು. ಇವರಲ್ಲಿ ಎಲ್ಲ ವರ್ಗದ ಜನರೂ ಇದ್ದರು. ಒಮ್ಮೆ ದೂರದ ಓಯಸಿಸ್‌ನಿಂದ ಒಬ್ಬ ಶ್ರೀಮಂತ ಬಂದ. ಆಶ್ರಮದಲ್ಲಿ  ಆತಿಥ್ಯ ಸ್ವೀಕರಿಸಿದ ನಂತರ ಆಲ್‌_ಹಾಲ್‌ರ ಬಳಿಗೆ ಹೋಗಿ ತನ್ನನ್ನು ಕಾಡುತ್ತಿರುವ ಪ್ರಶ್ನೆಯೊಂದಕ್ಕೆ ಉತ್ತರ ಕೊಟ್ಟು ಅನುಗ್ರಹಿಸಬೇಕು ಎಂದು ಬೇಡಿಕೊಂಡ.

ಆಲ್‌_ಹಾಲ್‌ ಪ್ರಶ್ನೆ ಏನೆಂದು ಕೇಳಿದರು.

ಆತ ಹೇಳಿದ: `ನನ್ನಲ್ಲಿ ಸಾಕಷ್ಟು ಧನ, ಕನಕ, ಆಸ್ತಿಯಿದೆ. ಇದನ್ನು ಇತರರಿಗೆ ಕೊಟ್ಟು ಸಹಾಯ ಮಾಡುವುದು ಹೇಗೆ?

ಆಲ್‌_ಹಾಲ್‌ ಮರುಪ್ರಶ್ನೆ ಹಾಕಿದರು: `ಯಾವ ಇತರರು?’

Post

ಕಳ್ಳ, ಕಳವು

In ಆಲ್_ಹಾಲ್ ನ ಕಥೆಗಳು on October 2, 2006 by ಶೂನ್ಯ ಸಂಪಾದಕ

ಆಲ್‌_ಹಾಲ್‌ನ ಶಿಷ್ಯನಾಗಿದ್ದ ಕಾಲದಲ್ಲಿ ಟಾ_ರಸನ ಮೇಲೆ ಹಲವು ಕಳವಿನ ಆರೋಪಗಳಿದ್ದವು. ಆಲ್‌_ಹಾಲ್‌ನ ಉಳಿದ ಶಿಷ್ಯರು ಸದಾ ಟಾ_ರಸ ಇಂದು ಏನನ್ನು ಕದ್ದ ಎಂದು ಹೋಗಿ ಗುರುಗಳಿಗೆ ವರದಿ ಒಪ್ಪಿಸುವುದು ನಡೆದೇ ಇತ್ತು.

ಆಲ್‌_ಹಾಲ್‌ ಈ ದೂರುಗಳನ್ನು ದೂರುಗಳನ್ನು ಗಂಭೀರವಾಗಿ ಕೇಳಿಸಿಕೊಂಡು ಆಮೇಲೆ ಮರೆತು ಬಿಡುತ್ತಿದ್ದ. ಒಂದು ದಿನ ಆಲ್‌_ಹಾಲ್‌ನ ಹೆಂಡದ ಬುರುಡೆ ಕಾಣೆಯಾಯಿತು. ಧ್ಯಾನದ ಹೊತ್ತಿನ ಅಗತ್ಯಗಳಲ್ಲಿ ಒಂದಾಗಿದ್ದ ಇದು ಕಾಣೆಯಾದುದನ್ನು ಕಂಡು ಶಿಷ್ಯ ವೃಂದವೆಲ್ಲಾ ಗಾಬರಿಯಾಯಿತು. ಧ್ಯಾನದ ಹೊತ್ತು ಬಂದಾಗ ಇದು ಆಲ್‌_ಹಾಲ್‌ಗೂ ತಿಳಿಯಿತು. ಈ ಹಿಂದೆ ಟಾ_ರಸನ ವಿರುದ್ಧ ಕಳವಿನ ದೂರು ನೀಡಿದ್ದ ಶಿಷ್ಯರೆಲ್ಲಾ ಈಗ ಮತ್ತೆ ಜಾಗೃತರಾದರು.

`ನಾವು ಹಿಂದೆಯೇ ಹೇಳಿದ್ದೆವು. ನೀವಾಗ ಕೇಳಲಿಲ್ಲ. ಈಗ ಏನಾಯಿತು ನೋಡಿ. ನಿಮ್ಮ ಹೆಂಡದ ಬುರುಡೆಯನ್ನೇ ಟಾ_ರಸ ಕದ್ದಿದ್ದಾನೆ. ಈಗಲಾದರೂ ನಿಮಗೆ ನಾವು ಹೇಳುತ್ತಿದುದು ಎಷ್ಟು ಗಂಭೀರವಾದ ವಿಚಾರ ಎಂಬುದು ಅರ್ಥವಾಗಿರಬೇಕು’ ಎಂದು ಏಕ ಕಂಠದಲ್ಲಿ ಘೋಷಿಸಿದರು.

ಆಲ್‌_ಹಾಲ್‌ ಪ್ರತಿಕ್ರಿಯಿಸಿದ: `ನೀವು ಹೇಳಿದ ಉಳಿದೆಲ್ಲವನ್ನೂ ಟಾ_ರಸ ಕದ್ದಿರಬಹುದು. ಏಕೆಂದರೆ ಅವ್ಯಾವೂ ಅವನ ಬಳಿ ಇರಲಿಲ್ಲ. ಆದರೆ ಹೆಂಡ ಬುರುಡೆಯನ್ನು ಆತ ಕದಿಯಲು ಸಾಧ್ಯವಿಲ್ಲ. ಏಕೆಂದರೆ ಅದು ಆತನ ಒಳಗೇ ಇದೆ’.

Post

‘ಟೌತ್ವ’ ಎಂದರೆ…?

In ಆಲ್_ಹಾಲ್ ನ ಕಥೆಗಳು on September 30, 2006 by ಶೂನ್ಯ ಸಂಪಾದಕ

ಆಲ್‌_ಹಾಲ್‌ ತಮ್ಮ ಸಮಕಾಲೀನರ ನಡುವೆ ಮಹಾ ಗುರು ಎಂಬ ಬಿರುದಿಗೆ ಪಾತ್ರರಾದವರು. ಅವರಲ್ಲಿದ್ದ `ಗುರುತ್ವ’ವನ್ನು ಮೀರಿಸುವ ಯಾರೂ ಅವರ ಕಾಲದಲ್ಲಿ ಇರಲಿಲ್ಲ. ಇದನ್ನು ಸುಳ್ಳು ಮಾಡುವ ಉದ್ದೇಶದಿಂದ ಅಲ್ಲಿಗೆ ಬಂದ ಒಬ್ಬ `ಜ್ಞಾನಿ ಸಂತ’ ಅವರ ಜತೆ ಸಂವಾದ ಆರಂಭಿಸಿದ.

ಮಾತನಾಡಲು ಆರಂಭಿಸಿದ ಸ್ವಲ್ಪವೇ ಹೊತ್ತಿನಲ್ಲಿ ಆತನ ತಂತ್ರ ಏನು ಎಂಬುದು ಗುರು ಆಲ್‌_ಹಾಲ್‌ಗೆ ಅರ್ಥವಾಗಿ ಹೋಯಿತು. ಆದರೂ ಅವನ ಪ್ರಶ್ನೆಗಳಿಗೆ ಮಾಮೂಲಿನಂತೆಯೇ ಉತ್ತರಿಸುತ್ತಾ ಹೋದರು. ಅವರ ಉತ್ತರಗಳಿಂದ ಮತ್ತಷ್ಟು ಉತ್ತೇಜಿತನಾದ ಆತ ಮುಖ್ಯ ಪ್ರಶ್ನೆಯನ್ನು ಕೇಳಿಯೇ ಬಿಟ್ಟ.

`ನಿಮ್ಮ ಶಿಷ್ಯರಿಗೆ ಪ್ರಾಪ್ತಿಯಾಗುವ `ಟೌತ್ವ’ವಿದೆಯಲ್ಲ ಅದರ ಅರ್ಥ ಏನು?’

ಆಲ್‌_ಹಾಲ್‌ ಉತ್ತರಿಸಿದರು: `ಮುಂದೇನೂ ಸಂಭವಿಸುವುದಿಲ್ಲ ಎಂಬುದು ಅದರ ಅರ್ಥ’.

Post

ಮನುಷ್ಯನ ಸ್ವರೂಪ

In ಆಲ್_ಹಾಲ್ ನ ಕಥೆಗಳು on September 29, 2006 by ಶೂನ್ಯ ಸಂಪಾದಕ

ಆಲ್‌_ಹಾಲ್‌ರ ಬಳಿಗೆ ಬಂದ ಆರು ಮಂದಿ ದೊಡ್ಡ ವಿದ್ವಾಂಸರ ಗುಂಪೊಂದು ಬಹಳ ಹೊತ್ತು ಏನೇನೋ ಚರ್ಚಿಸಿತು. ಚರ್ಚೆಯ ಹೊತ್ತು ಮತ್ತು ಗಾಂಭೀರ್ಯವನ್ನು ದೂರದಿಂದಲೇ ಗಮನಿಸಿದ್ದ ಟಾ_ರಸ ವಿದ್ವಾಂಸರೆಲ್ಲಾ ಹೋದ ನಂತರ ಗುರುಗಳಲ್ಲಿ ಕೇಳಿದ `ಅವರೇನು ಚರ್ಚಿಸುತ್ತಿದ್ದರು?’

ಗುರುಗಳು ಉತ್ತರಿಸಿದರು `ಅವರು `ಟೌತ್ವ’ವನ್ನು ವಿವರಿಸುತ್ತಿದ್ದರು’.

ಟಾ_ರಸ ಮರು ಪ್ರಶ್ನೆ ಹಾಕಿದ `ಆ ವಿವರಣೆ ಏನು’

ಗುರುಗಳು ಅದನ್ನೊಂದು ರೂಪಕದ ಮೂಲಕ ವಿವರಿಸಿದರು: `ಆರು ಬುದ್ಧಿವಂತ ಕುರುಡ ಆನೆಗಳು ಮನುಷ್ಯನ ರೂಪ ಹೇಗಿದೆ ಎಂದು ನೋಡಲು ತೀರ್ಮಾನಿಸಿದವು. ಹಾಗೆ ಒಂದು ಆನೆ ಮನುಷ್ಯನನ್ನು ತನ್ನ ಕಾಲಿನಲ್ಲಿ ಮೆಟ್ಟಿ ಸ್ವರೂಪವನ್ನು ಪರೀಕ್ಷಿಸಿ ಹೇಳಿತು ಮನುಷ್ಯ ಸಪಾಟಾಗಿದ್ದಾನೆ. ಉಳಿದ ಆರು ಆನೆಗಳೂ ಅವನನ್ನು ಮೆಟ್ಟಿ ಮನುಷ್ಯ ಸಪಾಟಾಗಿರುವುದನ್ನು ಖಚಿತ ಪಡಿಸಿದವು’.