Archive for the ‘ಟಾ_ರಸನ ಕಥೆಗಳು’ Category

Post

ಹೆಣದ ಮೆರವಣಿಗೆ

In ಟಾ_ರಸನ ಕಥೆಗಳು on August 10, 2007 by ಶೂನ್ಯ ಸಂಪಾದಕ

ಟಾ_ರಸ ಪ್ರವಾಸದಲ್ಲಿದ್ದ. ಹಾದಿಯಲ್ಲಿ ಸಿಕ್ಕ ಊರಿನ ಕಟ್ಟೆಯೊಂದರ ಮೇಲೆ ಕುಳಿತು ತನ್ನ ಹೆಂಡದ ಬುರುಡೆಯನ್ನು ಎದುರಿಟ್ಟುಕೊಂಡು ಧ್ಯಾನಾಸಕ್ತನಾದ. ಊರಿಗೆ ಯಾರೋ ಯೋಗಿಗಳು ಬಂದಿದ್ದಾರೆ ಅಂದುಕೊಂಡ ಊರಿನ ಪ್ರಮುಖನೊಬ್ಬ ತಮ್ಮನ್ನು ಬಹುಕಾಲದಿಂದ ಕಾಡುತ್ತಿದ್ದ ಪ್ರಶ್ನೆಯೊಂದಕ್ಕೆ ಉತ್ತರ ಕಂಡುಕೊಳ್ಳಲು ತೀರ್ಮಾನಿಸಿದ.

ಟಾ_ರಸ ಕುಳಿತಿದ್ದ ಕಟ್ಟೆಯಲ್ಲಿಗೆ ಬಂದು ಎದುರು ಕುಳಿತರು. ಟಾ_ರಸ ಕಣ್ಣು ತೆರೆದು ಒಂದು ಗುಟುಕು ಹೆಂಡವನ್ನು ಗಂಟಲೊಳಕ್ಕಿಳಿಸಿ ಧ್ಯಾನ ಸಮಾಧಿಯೊಳಕ್ಕೆ ಇಳಿಯುವ ಮುನ್ನ ಎದುರು ಕುಳಿತಿದ್ದ ವ್ಯಕ್ತಿಯ ಮುಖ ನೋಡಿ ನಕ್ಕ.

ಇದನ್ನು ಕಂಡ ಊರ ಮುಖಂಡನಿಗೆ ಉತ್ಸಾಹ  ಬಂತು. ‘ಸ್ವಾಮೀ ನಾನು ಬಹುಕಾಲದಿಂದ ಒಂದು ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ಹೆಣದ ಮೆರವಣಿಗೆಯಲ್ಲಿ ಭಾಗವಹಿಸಿದಾಗ ಚಟ್ಟದ ಹಿಂದೆ ಸಾಗುವುದು ಶ್ರೇಷ್ಠವೋ ಮುಂದೆ ಸಾಗುವುದು ಶ್ರೇಷ್ಠವೋ?’ ಎಂದು ಪ್ರಶ್ನಿಸಿದ.

ತಾನು ಉಳಿದುಕೊಳ್ಳುವ ಊರುಗಳಲ್ಲಿ ಇಂಥ ಪ್ರಶ್ನೆಗಳೊಂದಿಗೆ ಬರುವ ಜನಸಾಮಾನ್ಯರನ್ನು ಪ್ರೀತಿಯಿಂದ ಕಾಣುತ್ತಿದ್ದ ಟಾ_ರಸ ‘ಹೇಗೆ ಹೋದರೂ ಶ್ರೇಷ್ಠವೇ’. ಎಂದು ಸಾಂತ್ವನ ನೀಡಲು ಪ್ರಯತ್ನಿಸಿದ.

ಆದರೆ ಪ್ರಶ್ನೆ ಕೇಳಿದಾತನಿಗೆ ಸಮಾಧಾನವಾಗಲಿಲ್ಲ. ‘ಚಟ್ಟದ ಎಡ ಭಾಗ ಶ್ರೇಷ್ಠವೋ ಬಲ ಭಾಗ ಶ್ರೇಷ್ಠವೋ?’ ಎಂದು ಮರುಪ್ರಶ್ನೆ ಎಸೆದ.

ಈ ಹೊತ್ತಿಗಾಗಲೇ ಧ್ಯಾನ ಸಮಾಧಿಗೆ ತೆರಳಿದ್ದ ಟಾ_ರಸ ಈ ಪ್ರಶ್ನಾ ಪ್ರಹಾರದಿಂದ ಇಹಕ್ಕೆ ಹಿಂದಿರುಗಿ ತನ್ನೆದುರು ಇದ್ದ ಬುರುಡೆಯಲ್ಲಿದ್ದಷ್ಟೂ ಹೆಂಡವನ್ನು ಗಂಟಲಿಗೆ ಸುರಿದುಕೊಂಡು ಹೇಳಿದ- ‘ಎಲ್ಲಿದ್ದರೂ ಪರವಾಗಿಲ್ಲ. ಚಟ್ಟದ ಮೇಲಿರದಂತೆ ಎಚ್ಚರ ವಹಿಸುವುದು ಉತ್ತಮ’.

Post

ನೀರಿನಲ್ಲಿ ನಡೆಯುವ ವಿದ್ಯೆ

In ಟಾ_ರಸನ ಕಥೆಗಳು on March 25, 2007 by ಶೂನ್ಯ ಸಂಪಾದಕ

ಟಾ_ರಸ  ಒಂದು ದಿನ ಆಲ್‌_ಹಾಲ್‌ರ ಆಶ್ರಮದ ಬದಿಯಲ್ಲಿ ಹರಿಯುತ್ತಿದ್ದ ನದಿಯ ಆಚೆ ದಡದಲ್ಲಿ ತನ್ನೊಬ್ಬ ಗೆಳೆಯನೊಂದಿಗೆ ಧ್ಯಾನಕ್ಕೆ ಕುಳಿತ. ನೊರೆಯುಕ್ಕುವ ಹೆಂಡದ ಬುರುಡೆಯೊಂದಿಗೆ ಕುಳಿತಿದ್ದಾಗ ಪಶ್ಚಿಮ ದೇಶದ ಸಾಧಕನೊಬ್ಬ ಆಲ್‌_ಹಾಲ್‌ರ ಆಶ್ರಮದ ದಾರಿ ಕೇಳಿಕೊಂಡು ಬಂದ. ನದಿಯಾಚೆ ಇದ್ದ ಆಶ್ರಮವನ್ನು ತೋರಿಸಿ ಈ ಗೆಳೆಯರು ಮತ್ತೆ ಧ್ಯಾನಮಗ್ನರಾದರು.

ನದಿಯ ಅಗಲ ನೋಡಿ ಆ ಸಾಧಕ ಅಲ್ಲೇ ಕುಳಿತ. ಈ ಹೊತ್ತಿಗೆ ಏನೋ ನೆನಪಾದವನಂತೆ ಮೇಲೆದ್ದ ಟಾ_ರಸನ ಗೆಳೆಯ ನೀರಿನ ಮೇಲೆ ನಡೆಯುತ್ತ ಆಶ್ರಮದವರೆಗೆ ಹೋಗಿ ಒಂದು ಬುರುಡೆ ಹೆಂಡ ತಂದು ಆ ಸಾಧಕನ ಎದುರು ಇಟ್ಟ..

ಸಾಧಕ ಹೆಂಡ ಸೇವನೆ ಆರಂಭಿಸಿದಾಗ ಅವನಿಗೆ ತಿನ್ನಲು ಏನೂ ಇಲ್ಲ ಎಂದು ಟಾ_ರಸನಿಗೆ ನೆನಪಾಯಿತು.

ಅವನೂ ನೀರಿನ ಮೇಲೆ ನಡೆದು ಹೋಗಿ ಒಂದಷ್ಟು ಆಹಾರ ತಂದ. ಇವರಿಬ್ಬರೂ ನೀರಿನ ಮೇಲೆ ನಡೆಯುವುದನ್ನು ಕಂಡ ಆ ಪಶ್ಚಿಮದ ಸಾಧಕ ತನ್ನ ಸಾಧನೆ ತೋರಿಸಲು ನೀರಿನ ಮೇಲೆ ನಡೆಯಲು ಹೊರಟ. ನೀರಿನ ಮೇಲೆ ಕಾಲಿಟ್ಟ ತಕ್ಷಣ ಆತ  ಮುಳುಗುತ್ತಿದ್ದ. ಮತ್ತೆ ಎದ್ದು ನಿಂತು ನೀರಿನ ಮೇಲೆ ನಡೆದೇ ಬಿಡಲು ತಾನು ಕಲಿತ ಯೋಗ ವಿದ್ಯೆಯನ್ನೆಲ್ಲಾ ನೆನಪಿಸಿಕೊಂಡು ಪ್ರಯತ್ನಿಸಿದ. ವೈಫಲ್ಯದ ಪರಂಪರೆಯೇ ಮುಂದುವರಿಯಿತು.

ತಮ್ಮ ಅತಿಥಿಯ ಪಾಡನ್ನು ನೋಡುತ್ತಿದ್ದ ಟಾ_ರಸನಿಗೆ ಸಮಸ್ಯೆ ಅರ್ಥವಾಯಿತು. ತನ್ನ ಗೆಳೆಯನನ್ನು ಕರೆದು ‘ಅವನಿಗೆ ನದಿ ದಾಟಿ ಆಚೆ ಹೋಗಲಿಕ್ಕಿರಬಹುದು. ನಾವು ದಾಟಿದ ಸೇತುವೆ ನೀರು ಹರಿಯುತ್ತಿರುವುದು ಅವನಿಗೆ ಗೊತ್ತಾಗಲಿಲ್ಲ ಅನ್ನಿಸುತ್ತಿದೆ. ಅದನ್ನು ತೋರಿಸು’ ಎಂದ.

Post

ನರಕವಾಸಿಯ ಭಯ

In ಟಾ_ರಸನ ಕಥೆಗಳು on February 9, 2007 by ಶೂನ್ಯ ಸಂಪಾದಕ

ಟಾ_ರಸ ಧ್ಯಾನಸ್ಥನಾದಾಗ ದೇವರ ಜತೆ ಸಂಭಾಷಿಸುತ್ತಿರುತ್ತಾನೆ ಎಂಬುದು ಜನಪ್ರಿಯ ನಂಬಿಕೆ. ಕೆಲವರು ಹೇಳುವಂತೆ ಅವನು ಸ್ವರ್ಗ-ನರಕಗಳ ದರ್ಶನವನ್ನೂ ಮಾಡಿಕೊಂಡು ಹಿಂದಿರುಗುತ್ತಿದ್ದನಂತೆ.  ಈ ಕಾರಣದಿಂದಾಗಿಯೇ ಧ್ಯಾನದಿಂದ ಎದ್ದ ತಕ್ಷಣ ಅವನಾಡುವ ಮಾತು ಈ ಲೋಕದ್ದಲ್ಲ ಎಂಬಂತೆ ಇರುತ್ತವೆ ಎಂದು ಕೆಲವರು ಹೇಳುತ್ತಾರೆ.

ಟಾ_ರಸ ಒಂದು ದಿನ ಎಂದಿನಂತೆ ಈಚಲ ಮರದ ಕೆಳಗೆ  ಕುಳಿತಿದ್ದಾಗ ಒಬ್ಬಾತ ಬಂದು ಸ್ವರ್ಗ-ನರಕಗಳ ಕುರಿತು ಮಾತನಾಡಲು ತೊಡಗಿದ. ಟಾ_ರಸ `ಒಂದು ನಿಮಿಷ’ ಎಂದು ಹೇಳಿ ಸಮಾಧಿಗೆ ತೆರಳಿದ. ಒಂದೆರಡು ನಿಮಿಷಗಳ ನಂತರ ಕಣ್ಣು ತೆರೆದಾಗ ಎದುರಿದ್ದಾತ `ನರಕದ ಹಿಂಸೆಯ ಬಗೆಗಿನ ತಮ್ಮ ಅಭಿಪ್ರಾಯವೇನು?’ ಎಂದು ಪ್ರಶ್ನಿಸಿದ.

ಟಾ_ರಸ ಉತ್ತರಿಸಿದ `ನಾನು ಈಗಷ್ಟೇ ನರಕದ ದರ್ಶನ ಮಾಡಿ ಬಂದೆ. ನರಕದ ಬಾಗಿಲು ತೆರೆದೇ ಇದೆ. ಆದರೆ ಯಾರೊಬ್ಬ ನರಕವಾಸಿಯೂ ಹೊರಗೆ ಬರುವ ಧೈರ್ಯ ಮಾಡುತ್ತಿಲ್ಲ!’

Post

ಬುದ್ಧಿವಂತನ ಪ್ರಶ್ನೆಗಳು

In ಟಾ_ರಸನ ಕಥೆಗಳು on January 26, 2007 by ಶೂನ್ಯ ಸಂಪಾದಕ

ಬಾಲಕ ಟಾ_ರಸನ ತುಂಟಾಟಗಳ ಕುರಿತು ಅನೇಕ ಕತೆಗಳಿವೆ. ಅದರಲ್ಲೊಂದು ಇಲ್ಲಿದೆ.

ಒಂದು ಮುಂಜಾನೆ ಮನೆಗೆ ತರಕಾರಿ ತರಲು ಟಾ_ರಸ ಮಾರುಕಟ್ಟೆಗೆ ಹೊರಟಿದ್ದ. ಎದುರಿನಿಂದ ಬಂದ `ಬುದ್ಧಿವಂತ’ ಹುಡುಗನೊಬ್ಬ `ಏನೋ  ಟಾ_ರಸ, ಎಲ್ಲಿಗೆ ಹೋಗುತ್ತಿದ್ದೀಯಾ’ ಎಂದು ಕೇಳಿದ. ಟಾ_ರಸ  ಇದಕ್ಕೆ `ನನ್ನ ಕಾಲು ಎಲ್ಲಿಗೆ ಕರೆದೊಯ್ಯುತ್ತದೋ ಅಲ್ಲಿಗೆ ಹೋಗುತ್ತಿದ್ದೇನೆ’ ಎಂದ.

`ಬುದ್ಧಿವಂತ’ನಿಗೆ ಏನು ಹೇಳಬೇಕೆಂದು ಅರ್ಥವಾಗದೆ ಸುಮ್ಮನಾದ. ಅಷ್ಟಕ್ಕೇ ಬಿಡದೆ ತುಂಬಾ ಯೋಚಿಸಿ ಮುಂದಿನ ಬಾರಿ ಸಿಕ್ಕಾಗ ಟಾ_ರಸ ಹೀಗೆಯೇ ಉತ್ತರಿಸಿದರೆ `ನಿನಗೆ ಕಾಲೇ ಇರಲಿಲ್ಲವಾದರೆ ಎಲ್ಲಿಗೆ ಹೋಗುತ್ತಿದ್ದೆ ?’ ಎಂದು ಕೇಳಲು ತೀರ್ಮಾನಿಸಿದ. ಕೆಲವೇ ದಿನಗಳಲ್ಲಿ ಟಾ_ರಸ ಮೊದಲಿನಂತೆಯೇ ರಸ್ತೆಯಲ್ಲಿ ಸಿಕ್ಕ. ಆಗ `ಬುದ್ಧಿವಂತ’ ಎಲ್ಲಿಗೆ ಹೋಗುತ್ತಿದ್ದೀಯಾ ಎಂಬ ಪ್ರಶ್ನೆಯನ್ನು ಪುನರಾವರ್ತಿಸಿದ. ಈ ಬಾರಿ ಟಾ_ರಸನ ಉತ್ತರ ಹೀಗಿತ್ತು `ಗಾಳಿ ಎಲ್ಲಿಗೆ ಕರೆದೊಯ್ಯುತ್ತದೆಯೋ ಅಲ್ಲಿಗೆ…!’

ಬುದ್ಧಿವಂತನಿಗೆ ತಲೆಕೆಟ್ಟು ಹೋಯಿತು. ಆ ಕ್ಷಣ ಏನೂ ಹೊಳೆಯದೆ ಸುಮ್ಮನಾದ. ಆದರೆ ಸ್ವಲ್ಪವೇ ಹೊತ್ತಿನಲ್ಲಿ  ಅವನಿಗೆ ಪರಿಹಾರ ದೊರೆಯಿತು. ಮುಂದಿನ ಬಾರಿ `ಗಾಳಿಯೇ ಇಲ್ಲದಿದ್ದರೆ ಎಲ್ಲಿಗೆ ಹೋಗುತ್ತಿದ್ದೆ ?’ ಎಂದು ಮರು ಪ್ರಶ್ನೆ ಹಾಕಲು ತೀರ್ಮಾನಿಸಿದ.

ಕೆಲವೇ ದಿನಗಳಲ್ಲಿ ಮತ್ತೆ ಟಾ_ರಸ ಹಾದಿಯಲ್ಲೇ ಸಿಕ್ಕ. ಎಂದಿನಂತೆ `ಬುದ್ಧಿವಂತ’ ಹುಡುಗ ಟಾ_ರಸನನ್ನು ಸೋಲಿಸಿಬಿಡಲು ಸಿದ್ಧನಾಗಿ `ಎಲ್ಲಿಗೆ ಹೋಗುತ್ತಿದ್ದೀಯಾ?’ ಎಂದು ಕೇಳಿದ.

ಟಾ_ರಸನ ಉತ್ತರ ಹೀಗಿತ್ತು: `ತರಕಾರಿ ತರಲು, ಸಂತೆಗೆ…’

Post

ಹಗಲಿನಲ್ಲಿ ನಕ್ಷತ್ರ ಎಣಿಸುವ ವಿಧಾನ

In ಟಾ_ರಸನ ಕಥೆಗಳು on January 25, 2007 by ಶೂನ್ಯ ಸಂಪಾದಕ

ಟಾ_ರಸ ಚಿಕ್ಕವನಿರುವಾಗ ನಡೆದ ಘಟನೆ ಇದು. ಒಂದು ಅಮವಾಸ್ಯೆಯ ರಾತ್ರಿ ಟಾ_ರಸ ಅಂಗಳದಲ್ಲಿ ಅಂಗಾತ ಮಲಗಿ ಏನನ್ನೋ ಎಣಿಸುತ್ತಿದ್ದ. ಇದನ್ನು ಕಂಡ ಟಾ_ರಸ ತಾಯಿ `ಏನು ಮಾಡುತ್ತಿದ್ದೀಯಾ ಮಗು?’ ಎಂದು ಕೇಳಿದಳು. ಟಾ_ರಸ  ಉತ್ತರಿಸಿದ `ನಾನು ನಕ್ಷತ್ರಗಳನ್ನು ಎಣಿಸುತ್ತಿದ್ದೇನೆ’.

ಮಗನ ಉತ್ತರ ಕೇಳಿದ ತಾಯಿಗೆ ಭಾರತ ದೇಶದ ರಾಜನೊಬ್ಬ ತನ್ನ ವಿದೂಷಕನಲ್ಲಿ ನಕ್ಷತ್ರಗಳ ಸಂಖ್ಯೆ ಎಷ್ಟು ಕೇಳಿದಾಗ ಆತ ಒಂದು ಚೀಲದ ತುಂಬ ಮರಳನ್ನು ಕೊಂಡೊಯ್ದು ಕೊಟ್ಟು ಇಲ್ಲಿರುವ ಮರಳಿನ ಕಣದಷ್ಟು ನಕ್ಷತ್ರಗಳಿವೆ ಎಂದಿದ್ದ ಕತೆ ನೆನಪಾಯಿತು. ಇದನ್ನು ಆಕೆ ಟಾ_ರಸನಿಗೂ ಹೇಳಿ ನಕ್ಷತ್ರಗಳೆಷ್ಟಿವೆ ಎಂಬುದನ್ನು ಲೆಕ್ಕಿಸುವುದು ಅಸಾಧ್ಯ ಎಂದು ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದಳು. ಈ ಕತೆ ಕೇಳುತ್ತಾ ಟಾ_ರಸನಿಗೆ ನಿದ್ರೆ ಬಂತು.

ಮರುದಿನ ಬೆಳಿಗ್ಗೆ ಟಾ_ರಸ ಸೀದಾ ನದಿಗೆ ಹೋಗಿ ಒಂದು ಚೀಲ ಮರಳು ತಂದು ಅದರ ಕಣಗಳನ್ನು ಲೆಕ್ಕ ಹಾಕತೊಡಗಿದ.

ಮಗನ ಸಾಹಸ ಕಂಡ ತಾಯಿ ಲಘುವಾಗಿ `ಏನು ಮಾಡುತ್ತಿದ್ದೀಯಾ’ ಎಂದು ಪ್ರಶ್ನಿಸಿದಳು
ಅದಕ್ಕೆ ಟಾ_ರಸ : ನನಗೀಗ ಹಗಲಿನಲ್ಲಿ ನಕ್ಷತ್ರಗಳನ್ನು ಎಣಿಸುವುದು ಹೇಗೆ ಎಂದು ತಿಳಿದಿದೆ’ ಎಂದು ಉತ್ತರಿಸಿದ.

Post

ಸೊಳ್ಳೆ ಸಂಹಾರ ಕಥನವು

In ಟಾ_ರಸನ ಕಥೆಗಳು on January 24, 2007 by ಶೂನ್ಯ ಸಂಪಾದಕ

ಟಾ_ರಸ ಒಬ್ಬ ಕ್ರೂರಿ ದರೋಡೆಕೋರನಿಗೆ ಸಾಂತ್ವನ ನೀಡಿದ ವಿಷಯ ವಿವಿಧ ರೂಪ ಪಡೆದು ಜನಜನಿತವಾಗಿತ್ತು. ಇದನ್ನು ಕೇಳಿದ ಕೆಲವು ಹಳ್ಳಿಗರು ಒಂದು ದಿನ ಬಂದು ಟಾ_ರಸನನ್ನು ಭೇಟಿಯಾಗಿ ತಮ್ಮ ಊರಿನ ಮೇಲೆ ಆಗಾಗ ದಾಳಿ ಮಾಡುವ ದರೋಡೆಕೋರರ ತಂಡವೊಂದರ ಬಗ್ಗೆ ತಿಳಿಸಿ ಅವರ ಕಾಟದಿಂದ ತಪ್ಪಿಸಬೇಕು ಎಂದು ವಿನಂತಿಸಿದರು. ಟಾ_ರಸ ಇದಕ್ಕೆ ಒಪ್ಪಿ ಆ ಹಳ್ಳಿಗೆ ಹೋದ. ಎಂದಿನಂತೆ ರಾತ್ರಿ ಅಲ್ಲಿದ್ದ ತಾಳೆ ಮರವೊಂದರ ಕೆಳಗೆ ನೊರೆಯುಕ್ಕುವ ಹೆಂಡದ ಬುರುಡೆಯೆದುರು ಟಾ_ರಸ ಧ್ಯಾನ ಮಗ್ನನಾಗಿದ್ದಾಗ ದರೋಡೆಕೋರರು ಅವನನ್ನು ಸುತ್ತುವರಿದರು. ಇದರ ಅರಿವೇ ಇಲ್ಲದಂತೆ ಟಾ_ರಸ ತನ್ನ ಊರುಗೋಲೆತ್ತಿಕೊಂಡು ಒಮ್ಮೆ ಗಾಳಿಯಲ್ಲಿ ತಿರುಗಿಸಿದ. ಹತ್ತು ಸೊಳ್ಳೆಗಳು ಸತ್ತು ಟಾ_ರಸನ ಹೆಂಡದ ಬುರುಡೆಯೆದುರು ಬಿದ್ದವು. ದರೋಡೆಕೋರರು ಮತ್ತೆ ಆ ಹಳ್ಳಿಯ ತಂಟೆಗೆ ಬರಲಿಲ್ಲ.

Post

ಗುರುವಿನ ಲಕ್ಷಣ

In ಟಾ_ರಸನ ಕಥೆಗಳು on January 23, 2007 by ಶೂನ್ಯ ಸಂಪಾದಕ

ಟಾ_ರಸ ಆಗಷ್ಟೇ ಬಂದು ಆಲ್‌_ಹಾಲ್‌ರ ಆಶ್ರಮಕ್ಕೆ ಸೇರಿದ್ದ. ಬಂದ ಕೆಲವೇ ದಿನಗಳಲ್ಲಿ ಆಶ್ರಮದ ಹಲವರಲ್ಲಿ ಪ್ರಶ್ನೆಗಳನ್ನು ಹುಟ್ಟಿಸಿದ್ದ ಟಾ_ರಸನನ್ನು ಕರೆದ ಗುರು ಆಲ್‌_ಹಾಲ್‌ ಅವನ ಕಿವಿಯಲ್ಲಿ `ವಿಮೋಚನಾ ಮಂತ್ರ’ ಬೋಧಿಸಿ `ಇದನ್ನು ನೀನು ಯಾರಿಗೂ ಹೇಳಬಾರದು. ಹೇಳಿದರೆ ನೀನು ಬಂಧನದಲ್ಲಿ ಸಿಲುಕಿ ನಿನ್ನಿಂದ ಕೇಳಿಸಿಕೊಂಡವರು ವಿಮೋಚಿತರಾಗುತ್ತಾರೆ’ ಎಂದು ಎಚ್ಚರಿಸಿ ಕಳುಹಿಸಿದರು.

ಅಲ್ಲಿಂದ ಹೊರಟ ಟಾ_ರಸ ಆಶ್ರಮದಲ್ಲಿದ್ದ ಎಲ್ಲ ವಿದ್ಯಾರ್ಥಿಗಳನ್ನೂ ಕರೆದು ಗುಂಪುಗೂಡಿಸಿ `ವಿಮೋಚನ ಮಂತ್ರ’ವನ್ನು ಉಚ್ಚ ಸ್ವರದಲ್ಸಿ ಹೇಳಿದ. ಈಗಾಗಲೇ ಆಲ್‌_ಹಾಲ್‌ರಿಂದ ವಿಮೋಚನ ಮಂತ್ರವನ್ನು ಅರಿತಿದ್ದ ಹಿರಿಯ ವಿದ್ಯಾರ್ಥಿಗಳು  ಹೋಗಿ ಆಲ್‌_ಹಾಲ್‌ಗೆ ದೂರು ಕೊಟ್ಟರು. ಅದಕ್ಕೆ ಅವರು  `ಅವನು ಗುರುವಾಗುವುದು ಖಚಿತ’ ಎಂದು ನಕ್ಕರು.

Post

ಮೌನವಾಗಿರಬೇಕೆ?

In ಟಾ_ರಸನ ಕಥೆಗಳು on December 26, 2006 by ಶೂನ್ಯ ಸಂಪಾದಕ

ಟಾ_ರಸ ಶಿಷ್ಯರನ್ನು ಸ್ವೀಕರಿಸುವ ಪರಿಪಾಠವನ್ನು ರೂಢಿಸಿಕೊಂಡಿರಲಿಲ್ಲ. ಒಬ್ಬಾತ ಬಂದು ತನ್ನನ್ನು ಶಿಷ್ಯನನ್ನಾಗಿ ತೆಗೆದುಕೊಳ್ಳಲೇ ಬೇಕು ಎಂದು ಒತ್ತಾಯಿಸಿದ. ಇದಕ್ಕೆ ಒಪ್ಪಿದ ಟಾ_ರಸ `ನನ್ನ ಶಿಷ್ಯನಾಗಿರಬೇಕಾದರೆ ನಾನು ಹೇಳುವವರೆಗೂ ನೀನು ಮಾತನಾಡಬಾರದು’ ಎಂದ. ಆತ ಇದಕ್ಕೊಪ್ಪಿ ಟಾ_ರಸನ ಜತೆ ನಿಂತ.

ಐದು ವರ್ಷಗಳ ಕಾಲ ಆತನಿಗೆ ಮಾತನಾಡುವ ಅನುಮತಿ ದೊರೆಯಲಿಲ್ಲ. ಕೊನೆಗೊಮ್ಮೆ ಅನುಮತಿ ದೊರೆತಾಗ ಆತ ಹೇಳಿದ `ಭಿಕ್ಷೆ ಬೇಡುವುದು ಕಷ್ಟ’.

ಮತ್ತೆ ಐದು ವರ್ಷದ ಮೌನದ ಮತ್ತೊಮ್ಮೆ ಮಾತನಾಡಲು ಅನುಮತಿ ಸಿಕ್ಕಾಗ ಆತ `ಹೊದೆಯಲೊಂದು ಕಂಬಳಿ ಕೊಡಿಸಿ’ ಎಂದ.

ಮತ್ತೆ ಐದು ವರ್ಷಗಳು ಉರುಳಿದವು ಮತ್ತೊಮ್ಮೆ ಮಾತನಾಡಲು ಅನುಮತಿ ದೊರೆಯಿತು `ನಾನೇಕೆ ಮೌನವಾಗಿರಬೇಕು?’ ಎಂದು ಪ್ರಶ್ನಿಸಿದ.

ಆಗ ಟಾ_ರಸ ಹೇಳಿದ `ಈ ಪ್ರಶ್ನೆಯನ್ನು ಮೊದಲ ದಿನವೇ ಕೇಳಿದ್ದರೆ ನೀನು ಮೌನವಾಗಿರಬೇಕಿರಲಿಲ್ಲ!’

Post

ಬದುಕಿನ ಭವಿಷ್ಯ

In ಟಾ_ರಸನ ಕಥೆಗಳು on October 9, 2006 by ಶೂನ್ಯ ಸಂಪಾದಕ

ಟಾ_ರಸ ತಾಳೆ ಮರದ ಕೆಳಗೆ ಹೆಂಡದ ಬುರುಡೆಯೊಂದಿಗೆ ಧ್ಯಾನಕ್ಕೆ ಕುಳಿತ ಹೊತ್ತಿನಲ್ಲಿ ಅವನು ಭವಿಷ್ಯ ನುಡಿಯುತ್ತಾನೆ ಎಂಬ ನಂಬಿಕೆ ಅನೇಕರಿಗೆ ಇತ್ತು. ಧ್ಯಾನಸ್ಥ ಸ್ಥಿತಿಯಲ್ಲಿ ಟಾ_ರಸ ಹೇಳುತ್ತಿದ್ದ ಕೆಲವು ಮಾತುಗಳನ್ನು ಹಲವರು ಭವಿಷ್ಯದ ಸೂಚನೆಗಳಾಗಿ ಪರಿಗಣಿಸುತ್ತಿದ್ದರು. ಇದನ್ನು ಅರಿತವರು ತಮ್ಮ ವೈಯಕ್ತಿಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಟಾ_ರಸನನ್ನು ಧ್ಯಾನದ ಹೊತ್ತಿನಲ್ಲಿ ಭೇಟಿಯಾಗುತ್ತಿದ್ದರು.

ಹೀಗೆ ಬಂದ ಒಬ್ಬಾತ ತಾನೆಷ್ಟು ಶ್ರೀಮಂತ, ತಾನೆಷ್ಟು ತೀರ್ಥಕ್ಷೇತ್ರಗಳಿಗೆ ಶಾಂತಿ ಹುಡುಕಿಕೊಂಡು ಅಲೆದಿದ್ದೇನೆ ಎಂದೆಲ್ಲಾ ಹೇಳಿಕೊಂಡು `ಆದರೂ ನನಗೆ ಶಾಂತಿ ದೊರೆತಿಲ್ಲ. ಆದುದರಿಂದ ನಾನು ಹೇಗೆ ಬದುಕಬೇಕು. ನನ್ನ ಮುಂದಿನ ಬದುಕು ಹೇಗಿರುತ್ತದೆ?’ ಎಂದು ಪ್ರಶ್ನಿಸಿದ.

ಟಾ_ರಸ ಉತ್ತರವೂ ಮಿಂಚಿನ ವೇಗದಲ್ಲಿ ಬಂತು: `ನಿನ್ನ ಬದುಕು ಬಹಳ ಕಷ್ಟವಿದೆ. ಹಿಂದೆ ಯಾರೂ ನಿನ್ನ ಬದುಕನ್ನು ಬಾಳಿ ನೋಡಿರಲಿಲ್ಲ!’

Post

ಸ್ವರ್ಗ-ನರಕ

In ಟಾ_ರಸನ ಕಥೆಗಳು on October 7, 2006 by ಶೂನ್ಯ ಸಂಪಾದಕ

ಟಾ_ರಸ ಧ್ಯಾನಸ್ಥನಾದಾಗ ದೇವರ ಜತೆ ಸಂಭಾಷಿಸುತ್ತಿರುತ್ತಾನೆ ಎಂಬುದು ಜನಪ್ರಿಯ ನಂಬಿಕೆ. ಕೆಲವರು ಹೇಳುವಂತೆ ಅವನು ಸ್ವರ್ಗ-ನರಕಗಳ ದರ್ಶನವನ್ನೂ ಮಾಡಿಕೊಂಡು ಹಿಂದಿರುಗುತ್ತಿದ್ದನಂತೆ.  ಈ ಕಾರಣದಿಂದಾಗಿಯೇ ಧ್ಯಾನದಿಂದ ಎದ್ದ ತಕ್ಷಣ ಅವನಾಡುವ ಮಾತು ಈ ಲೋಕದ್ದಲ್ಲ ಎಂಬಂತೆ ಇರುತ್ತವೆ ಎಂದು ಕೆಲವರು ಹೇಳುತ್ತಾರೆ.

ಟಾ_ರಸ ಒಂದು ದಿನ ಎಂದಿನಂತೆ ಈಚಲ ಮರದ ಕೆಳಗೆ  ಕುಳಿತಿದ್ದಾಗ ಒಬ್ಬಾತ ಬಂದು ಸ್ವರ್ಗ-ನರಕಗಳ ಕುರಿತು ಮಾತನಾಡಲು ತೊಡಗಿದ. ಟಾ_ರಸ `ಒಂದು ನಿಮಿಷ’ ಎಂದು ಹೇಳಿ ಸಮಾಧಿಗೆ ತೆರಳಿದ.

ಒಂದೆರಡು ನಿಮಿಷಗಳ ನಂತರ ಕಣ್ಣು ತೆರೆದಾಗ ಎದುರಿದ್ದಾತ `ನರಕದ ಹಿಂಸೆಯ ಬಗೆಗಿನ ತಮ್ಮ ಅಭಿಪ್ರಾಯವೇನು?’ ಎಂದು ಪ್ರಶ್ನಿಸಿದ.

ಟಾ_ರಸ ಉತ್ತರಿಸಿದ `ನಾನು ಈಗಷ್ಟೇ ನರಕದ ದರ್ಶನ ಮಾಡಿ ಬಂದೆ. ನರಕದ ಬಾಗಿಲು ತೆರೆದೇ ಇದೆ. ಆದರೆ ಯಾರೊಬ್ಬ ನರಕವಾಸಿಯೂ ಹೊರಗೆ ಬರುವ ಧೈರ್ಯ ಮಾಡುತ್ತಿಲ್ಲ!’