
In ಟಾ_ರಸನ ಕಥೆಗಳು on October 7, 2006 by ಶೂನ್ಯ ಸಂಪಾದಕ
ಟಾ_ರಸ ಒಂದು ದಿನ ತೊರೆಯ ದಂಡೆಯ ಮೇಲಿದ್ದ ತಾಳೆ ಮರದ ಕೆಳಗೆ ತನ್ನ ಹೆಂಡದ ಬುರುಡೆಯೊಂದಿಗೆ ಧ್ಯಾನಾಸಕ್ತನಾಗಿದ್ದ ಹೊತ್ತಿನಲ್ಲಿ ಆಗಂತುಕನೊಬ್ಬನ ಆಗಮನವಾಯಿತು. ಧ್ಯಾನಸ್ತ ಸ್ಥಿತಿಯಲ್ಲಿ ಹೆಂಡ ಸೇವನೆಯನ್ನು ಮುಂದುವರಿಸಿದ ಟಾ_ರಸ ಬಂದ ಆಗಂತುಕನ ಕಡೆ ಗಮನವನ್ನೇ ಹರಿಸಲಿಲ್ಲ.
ಆದರೆ ಆಗಂತುಕ ಬಿಡಲಿಲ್ಲ. ಟಾ_ರಸನ ಎದುರು ಕುಳಿತು ತಾನೊಬ್ಬ ಸಾಧಕ ಎಂದು ಪರಿಚಯಿಸಿಕೊಂಡು `ತಮಗೆ `ಟೌತ್ವ’ ಪ್ರಾಪ್ತಿಯಾಗಿರುವುದನ್ನು ಯಾರೋ ತಿಳಿಸಿದರು. ನಿಮ್ಮನ್ನು ಕಂಡು ನನ್ನ ಸಾಧನೆಗೆ ಮಾರ್ಗದರ್ಶನ ಪಡೆಯೋಣವೆಂದು ಬಂದಿದ್ದೇನೆ. ದಯವಿಟ್ಟು ನನ್ನ ಕೋರಿಕೆಯನ್ನು ಮನ್ನಿಸಬೇಕು’ ಎಂದು ವಿನಂತಿಸಿದ.
ಟಾ_ರಸ ಹೇಳಿದ: `ನಿನ್ನ ಸಾಧನೆಗಳೇನು?’
ಆಗಂತುಕ: `ಈ ಕಾಣಿಸುತ್ತಿರುವ ತೊರೆಯ ನೀರಿನ ಮೇಲೆ ನಡೆದುಕೊಂಡು ಆಚೆ ದಡಕ್ಕೆ ಹೋಗಬಲ್ಲೆ’
ಟಾ_ರಸ: `ಇದನ್ನು ಹೇಗೆ ಕಲಿತೆ?’
ಆಗಂತುಕ: `ಹತ್ತು ವರ್ಷದ ಸತತ ಸಾಧನೆಯಿಂದ’
ಟಾ_ರಸ: ಮೊಳಕಾಲುದ್ದ ನೀರಿರುವ ಈ ತೊರೆಯನ್ನು ದಾಟುವುದನ್ನು ಕಲಿಯಲು ಹತ್ತು ವರ್ಷ ಬೇಕಾಯಿತೇ?

In ಟಾ_ರಸನ ಕಥೆಗಳು on October 6, 2006 by ಶೂನ್ಯ ಸಂಪಾದಕ
ಇದು ಟಾ_ರಸ ಹೇಳಿದ ಆಲ್_ಹಾಲ್‌ನ ಕತೆ. ಒಂದು ದಿನ ಮಧ್ಯಾಹ್ನ ಟಾ_ರಸ ಊಟ ಮುಗಿಸಿ ಆಶ್ರಮದ ಮರದ ನೆರಳಲ್ಲಿ ಕುಳಿತಿದ್ದಾಗ ಅಲ್ಲಿಗೆ ಗುರು ಆಲ್_ಹಾಲ್‌ನ ಆಗಮನವಾಯಿತು. ಇಬ್ಬರೂ ಮೌನ ಸಂಭಾಷಣೆಯಲ್ಲಿ ತೊಡಗಿದ್ದಾಗ ಆಗಂತುಕನೊಬ್ಬ ಬಂದ. ಆತ ಹತ್ತಿರ ಬಂದು ಪರಿಚಯಿಸಿಕೊಂಡು ಆಲ್_ಹಾಲ್‌ನಲ್ಲಿ ಕೇಳಿದ. `ತಾವು ಮಹಾಜ್ಞಾನಿಗಳೆಂದು ತಿಳಿದಿದ್ದೇನೆ. ನನಗೇನಾದರೂ ಉಪದೇಶ ನೀಡಬಹುದೇ?’
ಆಲ್_ಹಾಲ್ ಮೌನ ಮುರಿದು ಮಾತನಾಡತೊಡಗಿದ: `ನಿನ್ನ ಊಟವಾಯಿತೇ?’
`ಆಯಿತು ಮಹಾಸ್ವಾಮಿ’
`ಸರಿ ಹಾಗಾದರೆ ಹೋಗಿ ನಿನ್ನ ತಟ್ಟೆ ತೊಳೆದಿಡು’

In ಟಾ_ರಸನ ಕಥೆಗಳು on October 6, 2006 by ಶೂನ್ಯ ಸಂಪಾದಕ
ಟಾ_ರಸ ಬಾಲಕನಾಗಿದ್ದಾಗ ನಡೆದ ಘಟನೆ ಇದು. ಒಂದು ದಿನ ಟಾ_ರಸ ಮತ್ತು ಅವನ ಗೆಳೆಯರು ಆಟವಾಡುತ್ತಿದ್ದಾಗ ಒಂದು ನಾಯಿ ಮರಿ ಬಂತು. ಈ ನಾಯಿ ಮರಿಯನ್ನು ಅಲ್ಲಿದ್ದ ಎಲ್ಲ ಬಾಲಕರೂ ಇಷ್ಟಪಟ್ಟರು.
ಪ್ರತಿಯೊಬ್ಬರೂ ನಾಯಿಯನ್ನು ಸಾಕಲು ತಾನೆಷ್ಟು ಸಮರ್ಥ ಎಂದು ವಾದಿಸ ತೊಡಗಿದ್ದರಿಂದ ಆಟ ಹೋಗಿ ಹೊಡೆದಾಟ ಆರಂಭವಾಯಿತು. ಆದರೂ ಸಮಸ್ಯೆ ಬಗೆ ಹರಿಯಲಿಲ್ಲ. ಕೊನೆಗೆ ಯಾರು ಅತ್ಯಂತ ದೊಡ್ಡ ಸುಳ್ಳು ಹೇಳುತ್ತಾನೋ ಅವನಿಗೆ ನಾಯಿ ಎಂದು ತೀರ್ಮಾನಿಸಲಾಯಿತು.
ನಾಯಿಯನ್ನು ಮಧ್ಯೆ ನಿಲ್ಲಿಸಿಕೊಂಡು ಒಬ್ಬೊಬ್ಬರೇ ಸುಳ್ಳುಗಳನ್ನು ಹೇಳಲು ತೊಡಗಿದರು. ಈ ಹೊತ್ತಿಗೆ ಸರಿಯಾಗಿ ಸನ್ಯಾಸಿಯಂತೆ ಕಾಣುವ ವೃದ್ಧರೊಬ್ಬರ ಆಗಮನವಾಯಿತು. ಮಕ್ಕಳು ನಾಯಿಯೊಂದರ ಸುತ್ತ ನಿಂತು ಏನು ಮಾಡುತ್ತಿದ್ದಾರೆ ಎಂಬ ಕುತೂಹಲ ಅವರನ್ನು ಕಾಡಿ ಮಕ್ಕಳನ್ನು ವಿಚಾರಿಸಿದರು. ಅವರು ಸುಳ್ಳು ಹೇಳುವ ಸ್ಪರ್ಧೆ ನಡೆಯುತ್ತಿದೆ ಎಂದು ಅವರ ವಿವರವನ್ನು ತಿಳಿಸಿದರು.
ಇದನ್ನು ಕೇಳಿ ಸಿಟ್ಟು ಮಾಡಿಕೊಂಡ ಆ ವೃದ್ಧ ಸನ್ಯಾಸಿ ಸುಳ್ಳು ಹೇಳುವುದು ಎಷ್ಟು ಕೆಟ್ಟದು ಎಂಬ ಭಾಷಣ ಬಿಗಿಯುತ್ತಾ `ನಾನು ನಿಮ್ಮಂತೆ ಚಿಕ್ಕವನಾಗಿದ್ದಾಗ ಸುಳ್ಳು ಹೇಳುತ್ತಿರಲಿಲ್ಲ….’ ಎಂದು ಹೇಳಿದ ತಕ್ಷಣ ಬಾಲಕ ಟಾ_ರಸ ದೊಡ್ಡ ನಿಟ್ಟುಸಿರಿನೊಂದಿಗೆ ಮಧ್ಯ ಪ್ರವೇಶಿಸಿ `ಸರಿ ನಾಯಿ ನಿಮಗೇ ದೊರೆಯಿತು’ ಎಂದು ಘೋಷಿಸಿದ.

In ಟಾ_ರಸನ ಕಥೆಗಳು on October 4, 2006 by ಶೂನ್ಯ ಸಂಪಾದಕ
ಟಾ_ರಸ ನಾಡಿಶಾಸ್ತ್ರ, ಮರ್ಮಶಾಸ್ತ್ರಗಳನ್ನು ಅಭ್ಯಾಸ ಮಾಡುತ್ತಿದ್ದ ದಿನಗಳವು. ಒಂದು ದಿನ ಮಧ್ಯಾಹ್ನ ಬೀಡಾಡಿ ದನವೊಂದು ಗುರುಕುಲಕ್ಕೆ ಸೇರಿದ ಹೊಲಕ್ಕೆ ನುಗ್ಗಿ ಪೈರನ್ನು ಕಬಳಿಸುತ್ತಿತ್ತು. ಇದನ್ನು ಕಂಡ ಗುರು ಆಲ್_ಹಾಲ್‌ರ ಪತ್ನಿ ಟಾ_ರಸನನ್ನು ಕೂಗಿ ಕರೆದು ದನವನ್ನು ಓಡಿಸಲು ಹೇಳಿದರು. ಟಾ_ರಸ ಸಣ್ಣದೊಂದು ಕಡ್ಡಿ ತೆಗೆದುಕೊಂಡು ದನವನ್ನು ಓಡಿಸಲು ಪ್ರಯತ್ನಿಸಿದ. ಅದು ಟಾ_ರಸನ ಪೆಟ್ಟುಗಳಿಗೆ ಯಾವ ಗೌರವವನ್ನೂ ಕೊಡದೇ ಪೈರು ತಿನ್ನುವ ತನ್ನ ಕಾಯಕವನ್ನು ಮುಂದುವರಿಸಿತು. ಟಾ_ರಸ ಸಣ್ಣ ಕಡ್ಡಿ ಬಳಸಿ ಎಚ್ಚರಿಕೆಯಿಂದ ಮೆಲ್ಲನೆ ಆ ದನವನ್ನು ತಟ್ಟಿ ಓಡಿಸುವ ಪ್ರಯತ್ನವನ್ನೂ ಮುಂದುವರಿಸಿದ.
ಇದನ್ನು ಮನೆಯೊಳಗಿನಿಂದಲೇ ನೋಡುತ್ತಿದ್ದ ಟಾ_ರಸನ ಗುರು ಪತ್ನಿಗೆ ಕೋಪ ತಡೆಯಲಾಗಲಿಲ್ಲ. ತಾವೇ ಒಂದು ದೊಡ್ಡ ದೊಣ್ಣೆಯೊಂದಿಗೆ ಬಂದು ದನಕ್ಕೆ ಎರಡು ಪೆಟ್ಟು ಕೊಟ್ಟು ಓಡಿಸಿದರು. ನಂತರ ಟಾ_ರಸನನ್ನು ಉದ್ದೇಶಿಸಿ `ಈ ಕಡ್ಡಿಯಿಂದ ತಟ್ಟಿದರೆ ಅದು ಹೋಗಲು ಸಾಧ್ಯವೇ?’ ಎಂದು ಪ್ರಶ್ನಿಸಿದರು.
ಟಾ_ರಸ ಸ್ವಲ್ಪ ಕೋಪದಿಂದಲೇ ಉತ್ತರಿಸಿದ ` ನೀವು ಮರ್ಮಶಾಸ್ತ್ರ ಕಲಿತಿದ್ದರೆ ನನ್ನ ಕಷ್ಟ ತಿಳಿಯುತ್ತಿತ್ತು. ನನಗೆ ಆ ದನದ ದೇಹದ ತುಂಬ ಮರ್ಮಗಳೂ ನಾಡಿಗಳೂ ಕಾಣಿಸುತ್ತಿದ್ದವು. ನನ್ನ ಪೆಟ್ಟು ಅವುಗಳಲ್ಲಿ ಒಂದಕ್ಕೆ ತಾಗಿದ್ದರೂ ಆ ದನ ಸಾಯುತ್ತಿತ್ತು’

In ಟಾ_ರಸನ ಕಥೆಗಳು on October 4, 2006 by ಶೂನ್ಯ ಸಂಪಾದಕ
ಆಲ್_ಹಾಲ್ ಅವರ ಶಿಷ್ಯರಲ್ಲಿ ಅನೇಕರಿಗೆ ಟಾ_ರಸನಿಗೆ `ಟೌತ್ವ’ ಪ್ರಾಪ್ತಿಯಾಗಿದೆ ಎಂಬುದನ್ನು ಒಪ್ಪಿಕೊಂಡಿರಲಿಲ್ಲ. ಇದು ಗುರು ಆಲ್_ಹಾಲ್‌ಗೂ ತಿಳಿದಿತ್ತು. ತನ್ನ ವಿದ್ಯಾರ್ಥಿಗಳ ತಪ್ಪು ತಿಳುವಳಿಕೆಯನ್ನು ನಿವಾರಿಸಲು ನಿರ್ಧರಿಸಿದ ಅವರು ಒಂದು ದಿನ ವಿದ್ಯಾರ್ಥಿಗಳೆಲ್ಲಾ ರಾತ್ರಿಯ ಊಟಕ್ಕೆ ಕುಳಿತಾಗ ತಮ್ಮ ತಟ್ಟೆ ಹಿಡಿದುಕೊಂಡು ಅಲ್ಲಿಗೆ ಹೋಗಿ ಎಲ್ಲರಂತೆ ಬಡಿಸಿಕೊಂಡರು.
ವಿದ್ಯಾರ್ಥಿಗಳೆಲ್ಲಾ ಗುರುಗಳು ಊಟ ಆರಂಭಿಸಲಿ ಎಂದು ಕಾಯುತ್ತಿದ್ದಾಗ ಗುರುಗಳು ಒಂದು ಪ್ರಶ್ನೆ ಮುಂದಿಟ್ಟು ಇದಕ್ಕೆ ಟಾ_ರಸನ ಹೊರತು ಪಡಿಸಿ ಉಳಿದ ಯಾರು ಬೇಕಾದರೂ ಉತ್ತರಿಸಿ ಊಟ ಆರಂಭಿಸಿ ಎಂದು ತಾವು ತಿನ್ನಲು ತೊಡಗಿದರು.
ಆ ಪ್ರಶ್ನೆ ಹೀಗಿತ್ತು `ನೀವು ಊಟ ಮಾಡುವುದು ಭೂತದಲ್ಲೋ, ವರ್ತಮಾನದಲ್ಲೋ ಭವಿಷ್ಯದಲ್ಲೋ?’
ಶಿಷ್ಯರೆಲ್ಲಾ ರಾತ್ರಿಯಿಡೀ ತಲೆಕೆಡಿಸಿಕೊಂಡು ಊಟದ ತಟ್ಟೆಗಳ ಮುಂದೆ ಕುಳಿತರು. ಮರುದಿನ ಮಧ್ಯಾಹ್ನವಾದರೂ ಯಾರಿಗೂ ಉತ್ತರ ಸಿಗಲಿಲ್ಲ. ಆಗ ಉತ್ತರ ಹೇಳಲು ಟಾ_ರಸನಿಗೆ ಅನುಮತಿ ದೊರೆಯಿತು.
ಟಾ_ರಸ ಹೇಳಿದ: `ನಾವು ಭೂತ, ವರ್ತಮಾನ, ಭವಿಷ್ಯಗಳಲ್ಲಿ ಊಟ ಮಾಡುವುದಿಲ್ಲ. ನಾವು ಊಟ ಮಾಡುವುದು ಬಾಯಿಯಲ್ಲಿ’

In ಟಾ_ರಸನ ಕಥೆಗಳು on October 3, 2006 by ಶೂನ್ಯ ಸಂಪಾದಕ
ಆಲ್_ಹಾಲ್ ಅವರ ಆಶ್ರಮದಲ್ಲಿ ನಡೆದ ಘಟನೆ ಇದು. ಒಬ್ಬ ಪಶ್ಚಿಮ ನಾಡಿನ ವಿದ್ಯಾರ್ಥಿ ಬಂದು ಸೇರಿಕೊಂಡ. ಗುರುಗಳ ಬೋಧನೆಯನ್ನೆಲ್ಲಾ ಅಕ್ಷರಾರ್ಥದಲ್ಲಿ ಪಾಲಿಸುತ್ತಿದ್ದ ಈತ ಒಂದು ದಿನ ಭಿಕ್ಷೆಗೆ ಹೋಗಿದ್ದಾಗ ಯಾರೋ ಒಬ್ಬಾತ ಆಕ್ರಮಣ ನಡೆಸಿ ಭಿಕ್ಷಾ ಪಾತ್ರೆ ಕಿತ್ತುಕೊಳ್ಳಲು ಪ್ರಯತ್ನಿಸಿದ. ಆಲ್_ಹಾಲ್ ಅವರ ಶಿಷ್ಯನಾಗಿ ತಾನು ಹೇಗೆ ಪ್ರತಿಕ್ರಿಯಿಸಬೇಕು ಎಂದು ಯೋಚಿಸಿದ ಈತನಿಗೆ ನೆನಪಾಗಿದ್ದು `ಎಲ್ಲರೊಂದಿಗೂ ಸಹನೆಯಿಂದ ವರ್ತಿಸು’ ಎಂಬ ಗುರುವಚನ.
ದಾಳಿ ನಡೆಸಿ ಭಿಕ್ಷಾಪಾತ್ರೆಯನ್ನು ಕಿತ್ತೊಯ್ದರೂ ಸಹನೆಯಿಂದಿದ್ದ ಈತ ಆಶ್ರಮಕ್ಕೆ ಹಿಂದಿರುಗಿ ಗುರುಗಳಿಗೆ ಘಟನೆಯನ್ನು ವಿವರಿಸಿದ. ಆ ಹೊತ್ತಿನಲ್ಲಿ ಅಲ್ಲಿಯೇ ಇದ್ದ ಟಾ_ರಸ ಗಹಗಹಿಸಿ ನಕ್ಕ. ಗುರುಗಳೂ ನಗುವಿಗೆ ಜತೆಯಾದರು.
ಇವರಿಬ್ಬರೂ ಯಾಕೆ ನಕ್ಕರು ಎಂದು ಅರ್ಥವಾಗದೆ ತಲೆಕೆಡಿಸಿಕೊಂಡ ಆತ ಕೊನೆಗೆ ಟಾ_ರಸನನ್ನು ಭೇಟಿಯಾಗಿ `ನಾನು ಸಹನೆಯಿಂದ ವರ್ತಿಸುವ ಬೇರೆ ಮಾರ್ಗವಿತ್ತೇ?’ ಎಂದು ಪ್ರಶ್ನಿಸಿದ.
ಇದಕ್ಕೆ ಉತ್ತರಿಸಿದ ಟಾ_ರಸ `ಖಂಡಿತವಾಗಿಯೂ ಇತ್ತು. ನೀನು ಬಹಳ ಸಹನೆಯಿಂದ ನಿನ್ನ ಎಡಗೈಯಲ್ಲಿದ್ದ ಊರುಗೋಲನ್ನು ಬಲಗೈಗೆ ವರ್ಗಾಯಿಸಿ, ಸಹನೆಯಿಂದ ನಿನ್ನ ಶಕ್ತಿಯನ್ನೆಲ್ಲಾ ಕೇಂದ್ರೀಕರಿಸಿ, ಸಹನೆಯಿಂದ ಸಾಕಷ್ಟು ವೇಗವಾಗಿ ಆ ಕೋಲನ್ನು ಎತ್ತಿ, ಸಹನೆಯಿಂದ ಅವನಿಗೊಂದು ಏಟು ಕೊಡಬಹುದಿತ್ತು!’

In ಟಾ_ರಸನ ಕಥೆಗಳು on September 28, 2006 by ಶೂನ್ಯ ಸಂಪಾದಕ
ಆಲ್_ಹಾಲ್ ಅವರ ಆಶ್ರಮದಲ್ಲಿ ನಡೆದ ಘಟನೆ ಇದು. ಆಶ್ರಮದ ಮಧ್ಯೆ ಇದ್ದ ಎತ್ತರದ ಮರವೊಂದರ ಮೇಲೆ ಒಂದು ಬಿಳಿ ಧ್ವಜವಿತ್ತು. ಒಂದು ದಿನ ಗಾಳಿಗೆ ಧ್ವಜ ಜೋರಾಗಿ ಸದ್ದು ಮಾಡುತ್ತಿದ್ದಾಗ ಮರದ ಕೆಳಗೆ ನಿಂತಿದ್ದ ಇಬ್ಬರು ಶಿಷ್ಯರು ಧ್ವಜದ ಹಾರಾಟವನ್ನು ವಿಶ್ಲೇಷಿಸತೊಡಗಿದರು.
ಒಬ್ಬ ಹೇಳಿದ: ‘ಧ್ವಜ ಚಲಿಸುತ್ತಿದೆ. ಅಂದರೆ ಅದು ತನ್ನನ್ನು ಬಂಧಿಸಿಟ್ಟಿರುವ ಕಂಬದಿಂದ ವಿಮೋಚನೆ ಬಯಸುತ್ತಿದೆ’
ಎರಡನೆಯವನು ಇದನ್ನು ವಿರೋಧಿಸಿದ: ‘ಗಾಳಿ ಚಲಿಸುತ್ತಿದೆ. ಗಾಳಿ ಈಗಾಗಲೇ ಮುಕ್ತವಾಗಿರುವುದರಿಂದ ಧ್ವಜವನ್ನೂ ಮುಕ್ತಗೊಳಿಸಲು ಪ್ರಯತ್ನಿಸುತ್ತಿದೆ.’
ಈ ಹೊತ್ತಿಗೆ ಸ್ನಾನ ಮುಗಿಸಿ ಬರುತ್ತಿದ್ದ ಹಿರಿಯ ಶಿಷ್ಯರೊಬ್ಬರು ಇವರ ವಿವಾದವನ್ನು ಪರಿಹರಿಸಲು ‘ಧ್ವಜವೂ ಚಲಿಸುತ್ತಿಲ್ಲ, ಗಾಳಿಯೂ ಚಲಿಸುತ್ತಿಲ್ಲ. ಚಲಿಸುತ್ತಿರುವುದು ನಿಮ್ಮ ಮನಸ್ಸು’ ಎಂದು ಚರ್ಚೆಗೆ ಅಧ್ಯಾತ್ಮದ ಆಯಾಮ ಕೊಟ್ಟರು.
ಈ ಹೇಳಿಕೆಯ ತಾತ್ವಿಕತೆಯನ್ನು ಮೂವರೂ ಚರ್ಚಿಸಲಾರಂಭಿಸುವ ಹೊತ್ತಿಗೆ ಟಾ_ರಸನ ಆಗಮನವಾಯಿತು. ಮೂವರೂ ತಮ್ಮ ತಮ್ಮ ಅಭಿಪ್ರಾಯಗಳನ್ನು ಅವನಲ್ಲಿ ಹೇಳಿದರು.
ಟಾ_ರಸ ಸ್ವಲ್ಪ ಹೊತ್ತು ಯೋಚಿಸಿ ಹೇಳಿದ: ‘ಚಲಿಸುತ್ತಿರುವುದು ನಿಮ್ಮ ಮೂವರ ನಾಲಿಗೆ. ಅದಕ್ಕೆ ಮಾತುಗಳಿಂದ ಮುಕ್ತಿ ಬೇಕಾಗಿದೆ’

In ಟಾ_ರಸನ ಕಥೆಗಳು on September 28, 2006 by ಶೂನ್ಯ ಸಂಪಾದಕ
ಟಾ_ರಸ ಸಂಚಾರದಲ್ಲಿದ್ದಾಗ ಭೇಟಿಯಾದ ಪಶ್ಚಿಮದ ಜ್ಞಾನಿಯೊಬ್ಬ ತನ್ನನ್ನು ಕಾಡುತ್ತಿದ್ದ ಪ್ರಶ್ನೆಯೊಂದನ್ನು ಮುಂದಿಟ್ಟ- `ಪೂರ್ಣತೆ ಎಂದರೇನು?’
ಟಾ_ರಸ ಉತ್ತರಿಸಿದ. `ಅದು ಕನಸಿನಲ್ಲೂ ಕಲ್ಪನೆಯಲ್ಲೂ ಮಾತ್ರ ಇರುವಂಥದ್ದು. ಅದೊಂದು ವೇಳೆ ಸಾಕಾರಗೊಂಡರೆ ಈ ಜಗತ್ತು ಬದುಕಲು ಅಸಾಧ್ಯವಾದಷ್ಟು ಪೂರ್ಣವಾಗಿಬಿಡುತ್ತದೆ.’

In ಟಾ_ರಸನ ಕಥೆಗಳು on September 28, 2006 by ಶೂನ್ಯ ಸಂಪಾದಕ
ಟಾ_ರಸನಿಗೆ ಟೌತ್ವ ಪ್ರಾಪ್ತಿಯಾದ ಬಗೆ ಹೇಗೆ ಎಂಬ ಬಗ್ಗೆ ಅನೇಕ ಕತೆಗಳಿವೆ. ಇವುಗಳಲ್ಲಿ ಹಲವನ್ನು ಟಾ_ರಸ ನಿರಾಕರಿಸಿದ್ದ. ಕೆಲವನ್ನು `ಹೌದಾ!’ ಎಂಬ ಆಶ್ಚರ್ಯದೊಂದಿಗೆ ಆತನೇ ಕೇಳಿಸಿಕೊಳ್ಳುತ್ತಿದ್ದ. ನಿಮಗೆ ಹೇಗೆ ಟೌತ್ವ ಪ್ರಾಪ್ತಿಯಾಯಿತು ಎಂದು ಕೇಳಿದರೆ ಅವನು ಇವುಗಳಲ್ಲಿ ಒಂದನ್ನು ಆರಿಸಿಕೊಂಡು ಹೇಳುತ್ತಿದ್ದ. ಹೀಗೆ ಟಾ_ರಸ ಹೇಳಿದ ಕತೆಯೊಂದು ಹೀಗಿದೆ.
ಟಾ_ರಸ ಕಾಡಿನಲ್ಲಿ ಹೋಗುತ್ತಿರುವಾಗ ಹುಲಿಯೊಂದು ಎದುರಾಯಿತು. ಆಳವಾದ ಕಮರಿಯೊಂದರ ಬದಿಯಲ್ಲಿ ಟಾ_ರಸ ಹೋಗುತ್ತಿದ್ದ. ಹತ್ತಿರದಲ್ಲಿ ಯಾವ ಮರವೂ ಇರಲಿಲ್ಲ. ಎತ್ತರಕ್ಕೆ ಏರಿ ಪ್ರಾಣ ಉಳಿಸಿಕೊಳ್ಳುವಂತೆಯೇ ತಗ್ಗಿಗೆ ಇಳಿದು ಪ್ರಾಣ ಉಳಿಸಿಕೊಳ್ಳಬಹುದೆಂದು ತೀರ್ಮಾನಿಸಿದ ಟಾ_ರಸ ಕಮರಿಗೆ ಇಳಿಯಲು ನೋಡಿದ. ಅದೃಷ್ಟವಶಾತ್ ಒಂದು ಬಳ್ಳಿ ಇತ್ತು. ಅದನ್ನು ಹಿಡಿದುಕೊಂಡು ಅರ್ಧದಷ್ಟು ಕೆಳಗಿಳಿದಾಗ ಕಮರಿಯಲ್ಲೊಂದು ಹುಲಿ ನಿಂತು ಟಾ_ರಸ ಕೆಳಗಿಳಿಯುವುದನ್ನೇ ಆಸೆಯಿಂದ ನೋಡುತ್ತಿತ್ತು. ಕಂಗಾಲಾದ ಟಾ_ರಸ ಬಳ್ಳಿಯನ್ನು ಹಿಡಿದುಕೊಂಡು ನೇತಾಡುತ್ತಾ ನಿಂತರೆ ಮೇಲಿದ್ದ ಹುಲಿ ಕೆಳಗೆ ಇಣುಕಿ ಘರ್ಜಿಸುತ್ತಿತ್ತು.
ಇಂಥದ್ದೊಂದು ಕ್ಷಣದಲ್ಲಿ ಟಾ_ರಸನಿಗೆ ಕಂಡದ್ದು ಚಳ್ಳೆ ಹಣ್ಣಿನ ಗಿಡ. ಅತ್ತ ಬಾಗಿ ಒಂದು ಹಣ್ಣು ಬಾಯಿಗೆ ಹಾಕಿಕೊಂಡ. ಚಳ್ಳೆ ಹಣ್ಣು ಸಿಹಿಯಾಗಿರುವುದು ಟಾ_ರಸನಿಗೆ ಮೊಟ್ಟ ಮೊದಲ ಬಾರಿಗೆ ತಿಳಿಯಿತು. ಟೌತ್ವ ಪ್ರಾಪ್ತಿಯಾಯಿತು.

In ಟಾ_ರಸನ ಕಥೆಗಳು on September 28, 2006 by ಶೂನ್ಯ ಸಂಪಾದಕ
ಟಾ_ರಸ ಪೇಟೆಯ ನಡುವಣ ಬೀದಿಯಲ್ಲಿ ಹೋಗುತ್ತಿದ್ದಾಗ ಯಾರೋ ಗಟ್ಟಿ ಧ್ವನಿಯಲ್ಲಿ ಪ್ರವಚನ ನೀಡುತ್ತಿರುವುದು ಕೇಳಿಸಿತು. ಧ್ವನಿಯ ಮೂಲ ಹುಡುಕಿ ಹೋದರೆ ದೊಡ್ಡ ಮೈದಾನದಲ್ಲಿ ಶ್ರೀಶ್ರೀಗಳಾದವರೊಬ್ಬರು ರತ್ನಖಚಿತ ಪೀಠವೊಂದರ ಮೇಲೆ ಕುಳಿತು ಇಹಲೋಕದ ನಶ್ವರತೆಯ ಬಗ್ಗೆ ಪ್ರವಚನ ನೀಡುತ್ತಿದ್ದರು. ಟಾ_ರಸ ಇದನ್ನು ಆಲಿಸಿದ. ಶ್ರೀಶ್ರೀಗಳಾದವರು ಇಹಲೋಕ ಹೇಗೆ ಶಾಪಗ್ರಸ್ತವಾಗಿದೆ ಎಂಬುದನ್ನು ವಿವರಿಸುತ್ತಾ ಇಹದ ಕಷ್ಟಗಳನ್ನು ಶಪಿಸಿ ಪರದ ಸುಖವನ್ನು ವರ್ಣಿಸಿದರು.
ಇದನ್ನು ಕೇಳಿ ಸುಸ್ತಾದ ಟಾ_ರಸ ಎದ್ದು ಹೊರಡುವ ಹೊತ್ತಿಗೆ ಪಕ್ಕದಲ್ಲಿ ಕುಳಿತಿದ್ದವನೊಬ್ಬ `ಇಹಲೋಕ ಎಷ್ಟು ಶಾಪಗ್ರಸ್ತ!’ ಎಂದು ಉದ್ಗರಿಸಿದ.
ಟಾ_ರಸ ಕುಳಿತಲ್ಲಿಂದ ಮೇಲೇಳುತ್ತಾ `ನೀವೇನೂ ಕಂಗಾಲಾಗಬೇಡಿ. ಅವರು ಹೇಳಿದ ಇಹಲೋಕಕ್ಕೆ ನಾವಿರುವ ಇಹಲೋಕಕ್ಕೂ ಯಾವ ಸಂಬಂಧವೂ ಇಲ್ಲ’ ಎಂದ.