Post

ಸೊಳ್ಳೆ ಸಂಹಾರ ಕಥನವು

In ಟಾ_ರಸನ ಕಥೆಗಳು on January 24, 2007 by ಶೂನ್ಯ ಸಂಪಾದಕ

ಟಾ_ರಸ ಒಬ್ಬ ಕ್ರೂರಿ ದರೋಡೆಕೋರನಿಗೆ ಸಾಂತ್ವನ ನೀಡಿದ ವಿಷಯ ವಿವಿಧ ರೂಪ ಪಡೆದು ಜನಜನಿತವಾಗಿತ್ತು. ಇದನ್ನು ಕೇಳಿದ ಕೆಲವು ಹಳ್ಳಿಗರು ಒಂದು ದಿನ ಬಂದು ಟಾ_ರಸನನ್ನು ಭೇಟಿಯಾಗಿ ತಮ್ಮ ಊರಿನ ಮೇಲೆ ಆಗಾಗ ದಾಳಿ ಮಾಡುವ ದರೋಡೆಕೋರರ ತಂಡವೊಂದರ ಬಗ್ಗೆ ತಿಳಿಸಿ ಅವರ ಕಾಟದಿಂದ ತಪ್ಪಿಸಬೇಕು ಎಂದು ವಿನಂತಿಸಿದರು. ಟಾ_ರಸ ಇದಕ್ಕೆ ಒಪ್ಪಿ ಆ ಹಳ್ಳಿಗೆ ಹೋದ. ಎಂದಿನಂತೆ ರಾತ್ರಿ ಅಲ್ಲಿದ್ದ ತಾಳೆ ಮರವೊಂದರ ಕೆಳಗೆ ನೊರೆಯುಕ್ಕುವ ಹೆಂಡದ ಬುರುಡೆಯೆದುರು ಟಾ_ರಸ ಧ್ಯಾನ ಮಗ್ನನಾಗಿದ್ದಾಗ ದರೋಡೆಕೋರರು ಅವನನ್ನು ಸುತ್ತುವರಿದರು. ಇದರ ಅರಿವೇ ಇಲ್ಲದಂತೆ ಟಾ_ರಸ ತನ್ನ ಊರುಗೋಲೆತ್ತಿಕೊಂಡು ಒಮ್ಮೆ ಗಾಳಿಯಲ್ಲಿ ತಿರುಗಿಸಿದ. ಹತ್ತು ಸೊಳ್ಳೆಗಳು ಸತ್ತು ಟಾ_ರಸನ ಹೆಂಡದ ಬುರುಡೆಯೆದುರು ಬಿದ್ದವು. ದರೋಡೆಕೋರರು ಮತ್ತೆ ಆ ಹಳ್ಳಿಯ ತಂಟೆಗೆ ಬರಲಿಲ್ಲ.

Post

ಗುರುವಿನ ಲಕ್ಷಣ

In ಟಾ_ರಸನ ಕಥೆಗಳು on January 23, 2007 by ಶೂನ್ಯ ಸಂಪಾದಕ

ಟಾ_ರಸ ಆಗಷ್ಟೇ ಬಂದು ಆಲ್‌_ಹಾಲ್‌ರ ಆಶ್ರಮಕ್ಕೆ ಸೇರಿದ್ದ. ಬಂದ ಕೆಲವೇ ದಿನಗಳಲ್ಲಿ ಆಶ್ರಮದ ಹಲವರಲ್ಲಿ ಪ್ರಶ್ನೆಗಳನ್ನು ಹುಟ್ಟಿಸಿದ್ದ ಟಾ_ರಸನನ್ನು ಕರೆದ ಗುರು ಆಲ್‌_ಹಾಲ್‌ ಅವನ ಕಿವಿಯಲ್ಲಿ `ವಿಮೋಚನಾ ಮಂತ್ರ’ ಬೋಧಿಸಿ `ಇದನ್ನು ನೀನು ಯಾರಿಗೂ ಹೇಳಬಾರದು. ಹೇಳಿದರೆ ನೀನು ಬಂಧನದಲ್ಲಿ ಸಿಲುಕಿ ನಿನ್ನಿಂದ ಕೇಳಿಸಿಕೊಂಡವರು ವಿಮೋಚಿತರಾಗುತ್ತಾರೆ’ ಎಂದು ಎಚ್ಚರಿಸಿ ಕಳುಹಿಸಿದರು.

ಅಲ್ಲಿಂದ ಹೊರಟ ಟಾ_ರಸ ಆಶ್ರಮದಲ್ಲಿದ್ದ ಎಲ್ಲ ವಿದ್ಯಾರ್ಥಿಗಳನ್ನೂ ಕರೆದು ಗುಂಪುಗೂಡಿಸಿ `ವಿಮೋಚನ ಮಂತ್ರ’ವನ್ನು ಉಚ್ಚ ಸ್ವರದಲ್ಸಿ ಹೇಳಿದ. ಈಗಾಗಲೇ ಆಲ್‌_ಹಾಲ್‌ರಿಂದ ವಿಮೋಚನ ಮಂತ್ರವನ್ನು ಅರಿತಿದ್ದ ಹಿರಿಯ ವಿದ್ಯಾರ್ಥಿಗಳು  ಹೋಗಿ ಆಲ್‌_ಹಾಲ್‌ಗೆ ದೂರು ಕೊಟ್ಟರು. ಅದಕ್ಕೆ ಅವರು  `ಅವನು ಗುರುವಾಗುವುದು ಖಚಿತ’ ಎಂದು ನಕ್ಕರು.

Post

ಮೌನವಾಗಿರಬೇಕೆ?

In ಟಾ_ರಸನ ಕಥೆಗಳು on December 26, 2006 by ಶೂನ್ಯ ಸಂಪಾದಕ

ಟಾ_ರಸ ಶಿಷ್ಯರನ್ನು ಸ್ವೀಕರಿಸುವ ಪರಿಪಾಠವನ್ನು ರೂಢಿಸಿಕೊಂಡಿರಲಿಲ್ಲ. ಒಬ್ಬಾತ ಬಂದು ತನ್ನನ್ನು ಶಿಷ್ಯನನ್ನಾಗಿ ತೆಗೆದುಕೊಳ್ಳಲೇ ಬೇಕು ಎಂದು ಒತ್ತಾಯಿಸಿದ. ಇದಕ್ಕೆ ಒಪ್ಪಿದ ಟಾ_ರಸ `ನನ್ನ ಶಿಷ್ಯನಾಗಿರಬೇಕಾದರೆ ನಾನು ಹೇಳುವವರೆಗೂ ನೀನು ಮಾತನಾಡಬಾರದು’ ಎಂದ. ಆತ ಇದಕ್ಕೊಪ್ಪಿ ಟಾ_ರಸನ ಜತೆ ನಿಂತ.

ಐದು ವರ್ಷಗಳ ಕಾಲ ಆತನಿಗೆ ಮಾತನಾಡುವ ಅನುಮತಿ ದೊರೆಯಲಿಲ್ಲ. ಕೊನೆಗೊಮ್ಮೆ ಅನುಮತಿ ದೊರೆತಾಗ ಆತ ಹೇಳಿದ `ಭಿಕ್ಷೆ ಬೇಡುವುದು ಕಷ್ಟ’.

ಮತ್ತೆ ಐದು ವರ್ಷದ ಮೌನದ ಮತ್ತೊಮ್ಮೆ ಮಾತನಾಡಲು ಅನುಮತಿ ಸಿಕ್ಕಾಗ ಆತ `ಹೊದೆಯಲೊಂದು ಕಂಬಳಿ ಕೊಡಿಸಿ’ ಎಂದ.

ಮತ್ತೆ ಐದು ವರ್ಷಗಳು ಉರುಳಿದವು ಮತ್ತೊಮ್ಮೆ ಮಾತನಾಡಲು ಅನುಮತಿ ದೊರೆಯಿತು `ನಾನೇಕೆ ಮೌನವಾಗಿರಬೇಕು?’ ಎಂದು ಪ್ರಶ್ನಿಸಿದ.

ಆಗ ಟಾ_ರಸ ಹೇಳಿದ `ಈ ಪ್ರಶ್ನೆಯನ್ನು ಮೊದಲ ದಿನವೇ ಕೇಳಿದ್ದರೆ ನೀನು ಮೌನವಾಗಿರಬೇಕಿರಲಿಲ್ಲ!’

Post

‘ಟೌ’ತ್ವೀಯ ಮಾಹಿತಿ ಮತ್ತು ಪ್ರಕಟಣೆ

In ಪ್ರಕಟಣೆ on December 26, 2006 by ಶೂನ್ಯ ಸಂಪಾದಕ

ಟಾ_ರಸಾಭಿಮಾನಿಗಳಿಗೆಲ್ಲಾ ನಮಸ್ಕಾರ,

ಕಳೆದ ಎರಡು ತಿಂಗಳುಗಳಿಂದ ಶೂನ್ಯಸಂಪಾದನೋದ್ಯಮದಲ್ಲಿ ತೀವ್ರವಾಗಿ ತೊಡಗಿಸಿಕೊಂಡ ಫಲವಾಗಿ ಆಲ್_ಹಾಲ್ ಮತ್ತು ಆತನ ಶಿಷ್ಯ ಟಾ_ರಸನ ಕತೆಗಳನ್ನು ನಿಮಗೆ ಒದಗಿಸಲು ಸಾಧ್ಯವಾಗಲಿಲ್ಲ. ಎರಡು ತಿಂಗಳ ಅವಧಿಯ ಶೂನ್ಯ ಸಂಪಾದನೋದ್ಯಮದ ಫಲವಾಗಿ ಮತ್ತಷ್ಟು ಕತೆಗಳು ದೊರೆತಿವೆ. ಅವುಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಸಂತೋಷವಾಗುತ್ತಿದೆ. ಇಂದಿನಿಂದ ಮತ್ತೆ ದಿನಕ್ಕೊಂದು ಕತೆಯನ್ನೊದಗಿಸುವ ಭರವಸೆ ಈ ‘ಬಯಲು’ ಬ್ಲಾಗ್ ಕ್ಷೇತ್ರದ ನಿವಾಸಿ ಶೂನ್ಯಸಂಪಾದಕನದ್ದು.

‘ಟೌ’ ತ್ವಕ್ಕೆ ಜಯವಾಗಲಿ. ‘ಔ’ತ್ವ ಚಿರಾಯುವಾಗಲಿ.

ನಿಮ್ಮವ

ಶೂನ್ಯ ಸಂಪಾದಕ

Post

ರೂಪಕದ ಅರ್ಥ

In ಆಲ್_ಹಾಲ್ ನ ಕಥೆಗಳು on October 10, 2006 by ಶೂನ್ಯ ಸಂಪಾದಕ

ಟಾ_ರಸ ರೂಪಕಗಳಲ್ಲಿ ಉತ್ತರ ಕೊಡುವುದರಲ್ಲಿ ಪ್ರವೀಣ. ಅವನಿಗೆ ಎದುರಾಗುವ ಎಲ್ಲಾ ಪ್ರಶ್ನೆಗಳನ್ನೂ ಅವು ವಿಶಿಷ್ಟವಾಗಿ ಗ್ರಹಿಸಿ ರೂಪಕಗಳಲ್ಲಿ ಉತ್ತರಿಸುತ್ತಿದ್ದುದರಿಂದ ಅನೇಕರಿಗೆ ಅವು ಅರ್ಥವಾಗುತ್ತಿರಲಿಲ್ಲ. ವರ್ತಮಾನದಲ್ಲೂ ಟಾ_ರಸನ ಕತೆಗಳನ್ನು ಕೇಳುವ, ಓದುವ ಅನೇಕರು ಕತೆಗಳು ಅರ್ಥವಾಗಲಿಲ್ಲ ಎಂದು ತಿಣುಕಾಡುತ್ತಾರೆ.

ಟಾ_ರಸನ ಗುರುಗಳಾದ ಆಲ್‌_ಹಾಲ್‌ರ ಶಿಷ್ಯರಿಗೂ ಇದೇ ಸಮಸ್ಯೆ ಕಾಡಿ ಅವರು ಗುರುಗಳ ಬಳಿಗೆ ಹೋದರು. `ತಾವೇನೋ ಟಾ_ರಸನ ಉತ್ತರಗಳು, ಸಾಮಿತಿಗಳು, ದೃಷ್ಟಾಂತಗಳನ್ನು ಹೊಗಳುತ್ತೀರಿ. ಆತ ಯಾವತ್ತೂ ಅವುಗಳ ಅರ್ಥವನ್ನು ವಿವರಿಸಲೇ ಇಲ್ಲ’ ಎಂದರು.

ಇದನ್ನು ಕೇಳಿ ನಕ್ಕ ಆಲ್‌_ಹಾಲ್‌ `ನಿಮಗೆ ತಿನ್ನಲೆಂದು ಹಣ್ಣನ್ನು ಕೊಡುವವರು ಅದನ್ನು ಅಗಿದು ಕೊಟ್ಟರೆ ನಿಮಗೇನನ್ನಿಸುತ್ತದೆ?’ ಎಂದು ಪ್ರಶ್ನಿಸಿದರು.

Post

ಬದುಕಿನ ಭವಿಷ್ಯ

In ಟಾ_ರಸನ ಕಥೆಗಳು on October 9, 2006 by ಶೂನ್ಯ ಸಂಪಾದಕ

ಟಾ_ರಸ ತಾಳೆ ಮರದ ಕೆಳಗೆ ಹೆಂಡದ ಬುರುಡೆಯೊಂದಿಗೆ ಧ್ಯಾನಕ್ಕೆ ಕುಳಿತ ಹೊತ್ತಿನಲ್ಲಿ ಅವನು ಭವಿಷ್ಯ ನುಡಿಯುತ್ತಾನೆ ಎಂಬ ನಂಬಿಕೆ ಅನೇಕರಿಗೆ ಇತ್ತು. ಧ್ಯಾನಸ್ಥ ಸ್ಥಿತಿಯಲ್ಲಿ ಟಾ_ರಸ ಹೇಳುತ್ತಿದ್ದ ಕೆಲವು ಮಾತುಗಳನ್ನು ಹಲವರು ಭವಿಷ್ಯದ ಸೂಚನೆಗಳಾಗಿ ಪರಿಗಣಿಸುತ್ತಿದ್ದರು. ಇದನ್ನು ಅರಿತವರು ತಮ್ಮ ವೈಯಕ್ತಿಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಟಾ_ರಸನನ್ನು ಧ್ಯಾನದ ಹೊತ್ತಿನಲ್ಲಿ ಭೇಟಿಯಾಗುತ್ತಿದ್ದರು.

ಹೀಗೆ ಬಂದ ಒಬ್ಬಾತ ತಾನೆಷ್ಟು ಶ್ರೀಮಂತ, ತಾನೆಷ್ಟು ತೀರ್ಥಕ್ಷೇತ್ರಗಳಿಗೆ ಶಾಂತಿ ಹುಡುಕಿಕೊಂಡು ಅಲೆದಿದ್ದೇನೆ ಎಂದೆಲ್ಲಾ ಹೇಳಿಕೊಂಡು `ಆದರೂ ನನಗೆ ಶಾಂತಿ ದೊರೆತಿಲ್ಲ. ಆದುದರಿಂದ ನಾನು ಹೇಗೆ ಬದುಕಬೇಕು. ನನ್ನ ಮುಂದಿನ ಬದುಕು ಹೇಗಿರುತ್ತದೆ?’ ಎಂದು ಪ್ರಶ್ನಿಸಿದ.

ಟಾ_ರಸ ಉತ್ತರವೂ ಮಿಂಚಿನ ವೇಗದಲ್ಲಿ ಬಂತು: `ನಿನ್ನ ಬದುಕು ಬಹಳ ಕಷ್ಟವಿದೆ. ಹಿಂದೆ ಯಾರೂ ನಿನ್ನ ಬದುಕನ್ನು ಬಾಳಿ ನೋಡಿರಲಿಲ್ಲ!’

Post

ಸ್ವರ್ಗ-ನರಕ

In ಟಾ_ರಸನ ಕಥೆಗಳು on October 7, 2006 by ಶೂನ್ಯ ಸಂಪಾದಕ

ಟಾ_ರಸ ಧ್ಯಾನಸ್ಥನಾದಾಗ ದೇವರ ಜತೆ ಸಂಭಾಷಿಸುತ್ತಿರುತ್ತಾನೆ ಎಂಬುದು ಜನಪ್ರಿಯ ನಂಬಿಕೆ. ಕೆಲವರು ಹೇಳುವಂತೆ ಅವನು ಸ್ವರ್ಗ-ನರಕಗಳ ದರ್ಶನವನ್ನೂ ಮಾಡಿಕೊಂಡು ಹಿಂದಿರುಗುತ್ತಿದ್ದನಂತೆ.  ಈ ಕಾರಣದಿಂದಾಗಿಯೇ ಧ್ಯಾನದಿಂದ ಎದ್ದ ತಕ್ಷಣ ಅವನಾಡುವ ಮಾತು ಈ ಲೋಕದ್ದಲ್ಲ ಎಂಬಂತೆ ಇರುತ್ತವೆ ಎಂದು ಕೆಲವರು ಹೇಳುತ್ತಾರೆ.

ಟಾ_ರಸ ಒಂದು ದಿನ ಎಂದಿನಂತೆ ಈಚಲ ಮರದ ಕೆಳಗೆ  ಕುಳಿತಿದ್ದಾಗ ಒಬ್ಬಾತ ಬಂದು ಸ್ವರ್ಗ-ನರಕಗಳ ಕುರಿತು ಮಾತನಾಡಲು ತೊಡಗಿದ. ಟಾ_ರಸ `ಒಂದು ನಿಮಿಷ’ ಎಂದು ಹೇಳಿ ಸಮಾಧಿಗೆ ತೆರಳಿದ.

ಒಂದೆರಡು ನಿಮಿಷಗಳ ನಂತರ ಕಣ್ಣು ತೆರೆದಾಗ ಎದುರಿದ್ದಾತ `ನರಕದ ಹಿಂಸೆಯ ಬಗೆಗಿನ ತಮ್ಮ ಅಭಿಪ್ರಾಯವೇನು?’ ಎಂದು ಪ್ರಶ್ನಿಸಿದ.

ಟಾ_ರಸ ಉತ್ತರಿಸಿದ `ನಾನು ಈಗಷ್ಟೇ ನರಕದ ದರ್ಶನ ಮಾಡಿ ಬಂದೆ. ನರಕದ ಬಾಗಿಲು ತೆರೆದೇ ಇದೆ. ಆದರೆ ಯಾರೊಬ್ಬ ನರಕವಾಸಿಯೂ ಹೊರಗೆ ಬರುವ ಧೈರ್ಯ ಮಾಡುತ್ತಿಲ್ಲ!’

Post

ಸಾಧನೆ, ಸಾಧಕ

In ಟಾ_ರಸನ ಕಥೆಗಳು on October 7, 2006 by ಶೂನ್ಯ ಸಂಪಾದಕ

ಟಾ_ರಸ  ಒಂದು ದಿನ ತೊರೆಯ ದಂಡೆಯ ಮೇಲಿದ್ದ ತಾಳೆ ಮರದ ಕೆಳಗೆ ತನ್ನ ಹೆಂಡದ ಬುರುಡೆಯೊಂದಿಗೆ ಧ್ಯಾನಾಸಕ್ತನಾಗಿದ್ದ ಹೊತ್ತಿನಲ್ಲಿ ಆಗಂತುಕನೊಬ್ಬನ ಆಗಮನವಾಯಿತು. ಧ್ಯಾನಸ್ತ ಸ್ಥಿತಿಯಲ್ಲಿ ಹೆಂಡ ಸೇವನೆಯನ್ನು ಮುಂದುವರಿಸಿದ ಟಾ_ರಸ ಬಂದ ಆಗಂತುಕನ ಕಡೆ ಗಮನವನ್ನೇ ಹರಿಸಲಿಲ್ಲ.

ಆದರೆ ಆಗಂತುಕ ಬಿಡಲಿಲ್ಲ. ಟಾ_ರಸನ ಎದುರು ಕುಳಿತು ತಾನೊಬ್ಬ ಸಾಧಕ ಎಂದು ಪರಿಚಯಿಸಿಕೊಂಡು `ತಮಗೆ `ಟೌತ್ವ’ ಪ್ರಾಪ್ತಿಯಾಗಿರುವುದನ್ನು ಯಾರೋ ತಿಳಿಸಿದರು. ನಿಮ್ಮನ್ನು ಕಂಡು ನನ್ನ ಸಾಧನೆಗೆ ಮಾರ್ಗದರ್ಶನ ಪಡೆಯೋಣವೆಂದು ಬಂದಿದ್ದೇನೆ. ದಯವಿಟ್ಟು ನನ್ನ ಕೋರಿಕೆಯನ್ನು ಮನ್ನಿಸಬೇಕು’ ಎಂದು ವಿನಂತಿಸಿದ.

ಟಾ_ರಸ ಹೇಳಿದ: `ನಿನ್ನ ಸಾಧನೆಗಳೇನು?’

ಆಗಂತುಕ: `ಈ ಕಾಣಿಸುತ್ತಿರುವ ತೊರೆಯ ನೀರಿನ ಮೇಲೆ ನಡೆದುಕೊಂಡು ಆಚೆ ದಡಕ್ಕೆ ಹೋಗಬಲ್ಲೆ’

ಟಾ_ರಸ: `ಇದನ್ನು ಹೇಗೆ ಕಲಿತೆ?’

ಆಗಂತುಕ: `ಹತ್ತು ವರ್ಷದ ಸತತ ಸಾಧನೆಯಿಂದ’

ಟಾ_ರಸ: ಮೊಳಕಾಲುದ್ದ ನೀರಿರುವ ಈ ತೊರೆಯನ್ನು ದಾಟುವುದನ್ನು ಕಲಿಯಲು ಹತ್ತು ವರ್ಷ ಬೇಕಾಯಿತೇ?

Post

ಟಾ_ರಸ ಹೇಳಿದ ಕತೆ

In ಟಾ_ರಸನ ಕಥೆಗಳು on October 6, 2006 by ಶೂನ್ಯ ಸಂಪಾದಕ

ಇದು ಟಾ_ರಸ ಹೇಳಿದ ಆಲ್‌_ಹಾಲ್‌ನ ಕತೆ. ಒಂದು ದಿನ ಮಧ್ಯಾಹ್ನ ಟಾ_ರಸ ಊಟ ಮುಗಿಸಿ ಆಶ್ರಮದ ಮರದ ನೆರಳಲ್ಲಿ ಕುಳಿತಿದ್ದಾಗ ಅಲ್ಲಿಗೆ ಗುರು ಆಲ್‌_ಹಾಲ್‌ನ ಆಗಮನವಾಯಿತು. ಇಬ್ಬರೂ ಮೌನ ಸಂಭಾಷಣೆಯಲ್ಲಿ ತೊಡಗಿದ್ದಾಗ ಆಗಂತುಕನೊಬ್ಬ ಬಂದ. ಆತ ಹತ್ತಿರ ಬಂದು ಪರಿಚಯಿಸಿಕೊಂಡು ಆಲ್‌_ಹಾಲ್‌ನಲ್ಲಿ ಕೇಳಿದ. `ತಾವು ಮಹಾಜ್ಞಾನಿಗಳೆಂದು ತಿಳಿದಿದ್ದೇನೆ. ನನಗೇನಾದರೂ ಉಪದೇಶ ನೀಡಬಹುದೇ?’

ಆಲ್‌_ಹಾಲ್‌ ಮೌನ ಮುರಿದು ಮಾತನಾಡತೊಡಗಿದ:  `ನಿನ್ನ ಊಟವಾಯಿತೇ?’

`ಆಯಿತು ಮಹಾಸ್ವಾಮಿ’

`ಸರಿ ಹಾಗಾದರೆ ಹೋಗಿ ನಿನ್ನ ತಟ್ಟೆ ತೊಳೆದಿಡು’

Post

ಅತಿ ದೊಡ್ಡ ಸುಳ್ಳು

In ಟಾ_ರಸನ ಕಥೆಗಳು on October 6, 2006 by ಶೂನ್ಯ ಸಂಪಾದಕ

ಟಾ_ರಸ  ಬಾಲಕನಾಗಿದ್ದಾಗ ನಡೆದ ಘಟನೆ ಇದು. ಒಂದು ದಿನ ಟಾ_ರಸ ಮತ್ತು ಅವನ ಗೆಳೆಯರು ಆಟವಾಡುತ್ತಿದ್ದಾಗ ಒಂದು ನಾಯಿ ಮರಿ ಬಂತು. ಈ ನಾಯಿ ಮರಿಯನ್ನು ಅಲ್ಲಿದ್ದ ಎಲ್ಲ ಬಾಲಕರೂ ಇಷ್ಟಪಟ್ಟರು.

ಪ್ರತಿಯೊಬ್ಬರೂ ನಾಯಿಯನ್ನು ಸಾಕಲು ತಾನೆಷ್ಟು ಸಮರ್ಥ ಎಂದು ವಾದಿಸ ತೊಡಗಿದ್ದರಿಂದ ಆಟ ಹೋಗಿ ಹೊಡೆದಾಟ ಆರಂಭವಾಯಿತು. ಆದರೂ ಸಮಸ್ಯೆ ಬಗೆ ಹರಿಯಲಿಲ್ಲ. ಕೊನೆಗೆ ಯಾರು ಅತ್ಯಂತ ದೊಡ್ಡ ಸುಳ್ಳು ಹೇಳುತ್ತಾನೋ ಅವನಿಗೆ ನಾಯಿ ಎಂದು ತೀರ್ಮಾನಿಸಲಾಯಿತು.

ನಾಯಿಯನ್ನು ಮಧ್ಯೆ ನಿಲ್ಲಿಸಿಕೊಂಡು ಒಬ್ಬೊಬ್ಬರೇ ಸುಳ್ಳುಗಳನ್ನು ಹೇಳಲು ತೊಡಗಿದರು. ಈ ಹೊತ್ತಿಗೆ ಸರಿಯಾಗಿ ಸನ್ಯಾಸಿಯಂತೆ ಕಾಣುವ ವೃದ್ಧರೊಬ್ಬರ ಆಗಮನವಾಯಿತು. ಮಕ್ಕಳು ನಾಯಿಯೊಂದರ ಸುತ್ತ ನಿಂತು ಏನು ಮಾಡುತ್ತಿದ್ದಾರೆ ಎಂಬ ಕುತೂಹಲ ಅವರನ್ನು ಕಾಡಿ ಮಕ್ಕಳನ್ನು ವಿಚಾರಿಸಿದರು. ಅವರು ಸುಳ್ಳು ಹೇಳುವ ಸ್ಪರ್ಧೆ ನಡೆಯುತ್ತಿದೆ ಎಂದು ಅವರ ವಿವರವನ್ನು ತಿಳಿಸಿದರು.

ಇದನ್ನು ಕೇಳಿ ಸಿಟ್ಟು ಮಾಡಿಕೊಂಡ ಆ ವೃದ್ಧ ಸನ್ಯಾಸಿ ಸುಳ್ಳು ಹೇಳುವುದು ಎಷ್ಟು ಕೆಟ್ಟದು ಎಂಬ ಭಾಷಣ ಬಿಗಿಯುತ್ತಾ `ನಾನು ನಿಮ್ಮಂತೆ ಚಿಕ್ಕವನಾಗಿದ್ದಾಗ ಸುಳ್ಳು ಹೇಳುತ್ತಿರಲಿಲ್ಲ….’  ಎಂದು ಹೇಳಿದ ತಕ್ಷಣ ಬಾಲಕ ಟಾ_ರಸ ದೊಡ್ಡ ನಿಟ್ಟುಸಿರಿನೊಂದಿಗೆ ಮಧ್ಯ ಪ್ರವೇಶಿಸಿ `ಸರಿ ನಾಯಿ ನಿಮಗೇ ದೊರೆಯಿತು’ ಎಂದು ಘೋಷಿಸಿದ.