ಶೂನ್ಯ ಸಂಪಾದಕ

ಹೆಣದ ಮೆರವಣಿಗೆ

In ಟಾ_ರಸನ ಕಥೆಗಳು on August 10, 2007 at 11:53 am

ಟಾ_ರಸ ಪ್ರವಾಸದಲ್ಲಿದ್ದ. ಹಾದಿಯಲ್ಲಿ ಸಿಕ್ಕ ಊರಿನ ಕಟ್ಟೆಯೊಂದರ ಮೇಲೆ ಕುಳಿತು ತನ್ನ ಹೆಂಡದ ಬುರುಡೆಯನ್ನು ಎದುರಿಟ್ಟುಕೊಂಡು ಧ್ಯಾನಾಸಕ್ತನಾದ. ಊರಿಗೆ ಯಾರೋ ಯೋಗಿಗಳು ಬಂದಿದ್ದಾರೆ ಅಂದುಕೊಂಡ ಊರಿನ ಪ್ರಮುಖನೊಬ್ಬ ತಮ್ಮನ್ನು ಬಹುಕಾಲದಿಂದ ಕಾಡುತ್ತಿದ್ದ ಪ್ರಶ್ನೆಯೊಂದಕ್ಕೆ ಉತ್ತರ ಕಂಡುಕೊಳ್ಳಲು ತೀರ್ಮಾನಿಸಿದ.

ಟಾ_ರಸ ಕುಳಿತಿದ್ದ ಕಟ್ಟೆಯಲ್ಲಿಗೆ ಬಂದು ಎದುರು ಕುಳಿತರು. ಟಾ_ರಸ ಕಣ್ಣು ತೆರೆದು ಒಂದು ಗುಟುಕು ಹೆಂಡವನ್ನು ಗಂಟಲೊಳಕ್ಕಿಳಿಸಿ ಧ್ಯಾನ ಸಮಾಧಿಯೊಳಕ್ಕೆ ಇಳಿಯುವ ಮುನ್ನ ಎದುರು ಕುಳಿತಿದ್ದ ವ್ಯಕ್ತಿಯ ಮುಖ ನೋಡಿ ನಕ್ಕ.

ಇದನ್ನು ಕಂಡ ಊರ ಮುಖಂಡನಿಗೆ ಉತ್ಸಾಹ  ಬಂತು. ‘ಸ್ವಾಮೀ ನಾನು ಬಹುಕಾಲದಿಂದ ಒಂದು ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ಹೆಣದ ಮೆರವಣಿಗೆಯಲ್ಲಿ ಭಾಗವಹಿಸಿದಾಗ ಚಟ್ಟದ ಹಿಂದೆ ಸಾಗುವುದು ಶ್ರೇಷ್ಠವೋ ಮುಂದೆ ಸಾಗುವುದು ಶ್ರೇಷ್ಠವೋ?’ ಎಂದು ಪ್ರಶ್ನಿಸಿದ.

ತಾನು ಉಳಿದುಕೊಳ್ಳುವ ಊರುಗಳಲ್ಲಿ ಇಂಥ ಪ್ರಶ್ನೆಗಳೊಂದಿಗೆ ಬರುವ ಜನಸಾಮಾನ್ಯರನ್ನು ಪ್ರೀತಿಯಿಂದ ಕಾಣುತ್ತಿದ್ದ ಟಾ_ರಸ ‘ಹೇಗೆ ಹೋದರೂ ಶ್ರೇಷ್ಠವೇ’. ಎಂದು ಸಾಂತ್ವನ ನೀಡಲು ಪ್ರಯತ್ನಿಸಿದ.

ಆದರೆ ಪ್ರಶ್ನೆ ಕೇಳಿದಾತನಿಗೆ ಸಮಾಧಾನವಾಗಲಿಲ್ಲ. ‘ಚಟ್ಟದ ಎಡ ಭಾಗ ಶ್ರೇಷ್ಠವೋ ಬಲ ಭಾಗ ಶ್ರೇಷ್ಠವೋ?’ ಎಂದು ಮರುಪ್ರಶ್ನೆ ಎಸೆದ.

ಈ ಹೊತ್ತಿಗಾಗಲೇ ಧ್ಯಾನ ಸಮಾಧಿಗೆ ತೆರಳಿದ್ದ ಟಾ_ರಸ ಈ ಪ್ರಶ್ನಾ ಪ್ರಹಾರದಿಂದ ಇಹಕ್ಕೆ ಹಿಂದಿರುಗಿ ತನ್ನೆದುರು ಇದ್ದ ಬುರುಡೆಯಲ್ಲಿದ್ದಷ್ಟೂ ಹೆಂಡವನ್ನು ಗಂಟಲಿಗೆ ಸುರಿದುಕೊಂಡು ಹೇಳಿದ- ‘ಎಲ್ಲಿದ್ದರೂ ಪರವಾಗಿಲ್ಲ. ಚಟ್ಟದ ಮೇಲಿರದಂತೆ ಎಚ್ಚರ ವಹಿಸುವುದು ಉತ್ತಮ’.

ನೀರಿನಲ್ಲಿ ನಡೆಯುವ ವಿದ್ಯೆ

In ಟಾ_ರಸನ ಕಥೆಗಳು on March 25, 2007 at 12:26 pm

ಟಾ_ರಸ  ಒಂದು ದಿನ ಆಲ್‌_ಹಾಲ್‌ರ ಆಶ್ರಮದ ಬದಿಯಲ್ಲಿ ಹರಿಯುತ್ತಿದ್ದ ನದಿಯ ಆಚೆ ದಡದಲ್ಲಿ ತನ್ನೊಬ್ಬ ಗೆಳೆಯನೊಂದಿಗೆ ಧ್ಯಾನಕ್ಕೆ ಕುಳಿತ. ನೊರೆಯುಕ್ಕುವ ಹೆಂಡದ ಬುರುಡೆಯೊಂದಿಗೆ ಕುಳಿತಿದ್ದಾಗ ಪಶ್ಚಿಮ ದೇಶದ ಸಾಧಕನೊಬ್ಬ ಆಲ್‌_ಹಾಲ್‌ರ ಆಶ್ರಮದ ದಾರಿ ಕೇಳಿಕೊಂಡು ಬಂದ. ನದಿಯಾಚೆ ಇದ್ದ ಆಶ್ರಮವನ್ನು ತೋರಿಸಿ ಈ ಗೆಳೆಯರು ಮತ್ತೆ ಧ್ಯಾನಮಗ್ನರಾದರು.

ನದಿಯ ಅಗಲ ನೋಡಿ ಆ ಸಾಧಕ ಅಲ್ಲೇ ಕುಳಿತ. ಈ ಹೊತ್ತಿಗೆ ಏನೋ ನೆನಪಾದವನಂತೆ ಮೇಲೆದ್ದ ಟಾ_ರಸನ ಗೆಳೆಯ ನೀರಿನ ಮೇಲೆ ನಡೆಯುತ್ತ ಆಶ್ರಮದವರೆಗೆ ಹೋಗಿ ಒಂದು ಬುರುಡೆ ಹೆಂಡ ತಂದು ಆ ಸಾಧಕನ ಎದುರು ಇಟ್ಟ..

ಸಾಧಕ ಹೆಂಡ ಸೇವನೆ ಆರಂಭಿಸಿದಾಗ ಅವನಿಗೆ ತಿನ್ನಲು ಏನೂ ಇಲ್ಲ ಎಂದು ಟಾ_ರಸನಿಗೆ ನೆನಪಾಯಿತು.

ಅವನೂ ನೀರಿನ ಮೇಲೆ ನಡೆದು ಹೋಗಿ ಒಂದಷ್ಟು ಆಹಾರ ತಂದ. ಇವರಿಬ್ಬರೂ ನೀರಿನ ಮೇಲೆ ನಡೆಯುವುದನ್ನು ಕಂಡ ಆ ಪಶ್ಚಿಮದ ಸಾಧಕ ತನ್ನ ಸಾಧನೆ ತೋರಿಸಲು ನೀರಿನ ಮೇಲೆ ನಡೆಯಲು ಹೊರಟ. ನೀರಿನ ಮೇಲೆ ಕಾಲಿಟ್ಟ ತಕ್ಷಣ ಆತ  ಮುಳುಗುತ್ತಿದ್ದ. ಮತ್ತೆ ಎದ್ದು ನಿಂತು ನೀರಿನ ಮೇಲೆ ನಡೆದೇ ಬಿಡಲು ತಾನು ಕಲಿತ ಯೋಗ ವಿದ್ಯೆಯನ್ನೆಲ್ಲಾ ನೆನಪಿಸಿಕೊಂಡು ಪ್ರಯತ್ನಿಸಿದ. ವೈಫಲ್ಯದ ಪರಂಪರೆಯೇ ಮುಂದುವರಿಯಿತು.

ತಮ್ಮ ಅತಿಥಿಯ ಪಾಡನ್ನು ನೋಡುತ್ತಿದ್ದ ಟಾ_ರಸನಿಗೆ ಸಮಸ್ಯೆ ಅರ್ಥವಾಯಿತು. ತನ್ನ ಗೆಳೆಯನನ್ನು ಕರೆದು ‘ಅವನಿಗೆ ನದಿ ದಾಟಿ ಆಚೆ ಹೋಗಲಿಕ್ಕಿರಬಹುದು. ನಾವು ದಾಟಿದ ಸೇತುವೆ ನೀರು ಹರಿಯುತ್ತಿರುವುದು ಅವನಿಗೆ ಗೊತ್ತಾಗಲಿಲ್ಲ ಅನ್ನಿಸುತ್ತಿದೆ. ಅದನ್ನು ತೋರಿಸು’ ಎಂದ.

ದೇವರ ಜತೆಗಿನ ಜಗಳ

In ಆಲ್_ಹಾಲ್ ನ ಕಥೆಗಳು on March 23, 2007 at 10:12 am

ಲೋಕ ಸಂಚಾರಕ್ಕೆಂದು ಹೊರಟಿದ್ದ ಟಾ_ರಸ ಮತ್ತು ಗುರು ಆಲ್_ಹಾಲ್ ಆ ಮರಳುಗಾಡಿನಲ್ಲಿ ಅವರಿಗೆ ಪರಿಚಿತವಾಗಿದ್ದ ಓಯಸಿಸ್ ಬಳಿಗೆ ಬಂದಾಗ ಅದೂ ಬರಡಾಗಿತ್ತು. ಅಲ್ಲಿನ ಜನರೆಲ್ಲಾ ಕಂಗಾಲಾಗಿದ್ದರು.

ಗುರು ಆಲ್_ಹಾಲ್ ರನ್ನು ಕಂಡದ್ದೇ ತಡ ಅವರಲ್ಲೊಂದು ಆಶಾವಾದ ಮೂಡಿದು. ಗುರುಗಳು ಹೇಗಾದರೂ ಮಾಡಿ ಮಳೆ ಬರಿಸಬಹುದೆಂದು ಅವರಲ್ಲಿಗೆ ಬಂದು ಮಳೆ ಬರುವಂತೆ ದೇವರಲ್ಲಿ ಪ್ರಾರ್ಥಿಸಬೇಕೆಂದು ವಿನಂತಿಸಿದರು.

ಗುರು  ಆಲ್_ಹಾಲ್ ಹೇಳಿದರು ‘ನನಗೂ ದೇವರಿಗೂ ಜಗಳವಾಗಿದೆ. ಈಗ ನಾನೇನೂ ಕೇಳುವ ಸ್ಥಿತಿಯಲ್ಲಿ ಇಲ್ಲ’

ಓಯಸಿಸ್ ನ ಜನರು ಮಳೆ ಬರಿಸಲೇಬೇಕೆಂದು ಒತ್ತಾಯಿಸಿದರು. ಗುರು ಆಲ್_ಹಾಲ್  ಏನೋ ತೀರ್ಮಾನಿಸಿದವರಂತೆ ಹೆಗಲ ಮೇಲಿದ್ದ ಬಟ್ಟೆಯನ್ನು ತೆಗೆದು ಕಮಂಡಲದ ನೀರಿಗೆ ಅದ್ದಿ ಒದ್ದೆಯಾಗಿಸಿ ಹಿಂಡಿ ಹತ್ತಿರದಲ್ಲೇ ಇದ್ದ ಮುಳ್ಳುಕಂಟಿಯ ಮೇಲೆ ಒಣಗಿಸಲು ಹರಡಿದರು.

ಕೆಲವೇ ಕ್ಷಣದಲ್ಲಿ ಆಕಾಶದಲ್ಲಿ ಮೋಡಗಟ್ಟಿತು. ಜೋರಾಗಿ ಮಳೆ ಸುರಿಯಿತು.